ಬೆಂಗಳೂರು,ಏ.30-ವಿಧಾನಸಭೆ ಚುನಾವಣೆಗೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ನಾಳೆಯಿಂದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಭಾಷಣ ಮಾಡಲಿದ್ದಾರೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ನಂತರ ನರೇಂದ್ರ ಮೋದಿ ಪ್ರಥಮ ಬಾರಿಗೆ ಬಿಜೆಪಿ ಪರ ಪ್ರಚಾರ ನಡೆಸಲು ಆಗಮಿಸುತ್ತಿರುವುದರಿಂದ ಇಡೀ ರಾಜ್ಯದ ಜನತೆಯ ಚಿತ್ತ ಮೋದಿಯತ್ತ ನೆಟ್ಟಿದೆ.
ಈ ಹಿಂದೆ ಮೋದಿ ಅವರು ರಾಜ್ಯಕ್ಕೆ ಮೂರು ಬಾರಿ ಆಗಮಿಸಿದ್ದರು. ಬೆಂಗಳೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭ ಹಾಗೂ ಮೈಸೂರು ಮತ್ತು ದಾವಣೆಗೆರೆಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸಿ ರಾಜ್ಯ ಸರ್ಕಾರದ ವಿರುದ್ದ ಟೀಕಾ ಪ್ರಹರ ನಡೆಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ಪಕ್ಷದ ರಾಜ್ಯದೆಲ್ಲೆಡೆ ಬಿರುಸಿನ ಪ್ರಚಾರ ನಡೆಸಿದ್ದಾರೆ. ಅವರು ಹೋದ ಕಡೆಯೆಲ್ಲ ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದರು. ಇನ್ನೊಂದೆಡೆ ಮೋದಿ ಚುನಾವಣಾ ದಿನಾಂಕ ನಿಗದಿಯಾದ ನಂತರ ಮೋದಿ ರಾಜ್ಯಕ್ಕೆ ಬಾರದಿರುವುದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.
ಪ್ರತಿಪಕ್ಷಗಳು ಅವರನ್ನೇ ಗುರಿಯಾಗಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದರು. ಇದಕ್ಕೆ ಉತ್ತರವೆಂಬಂತೆ ನಾಳೆ ಮೋದಿ, ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ತಮ್ಮ ವಿರುದ್ದ ಮಾಡುತ್ತಿರುವ ಆರೋಪಗಳಿಗೆ ಉತ್ತರ ನೀಡುವ ಸಾಧ್ಯತೆ ಇದೆ.
ಬಿಜೆಪಿಗೂ ಮೋದಿ ಅನಿವಾರ್ಯ:
ಟಿಕೆಟ್ ಘೋಷಣೆಯಾದ ನಂತರ ಬಿಜೆಪಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಾಕಷ್ಟು ಬಾರಿ ಪ್ರಚಾರ ನಡೆಸಿದ್ದರಾದರೂ ನಿರೀಕ್ಷಿತ ಮಟ್ಟದಲ್ಲಿ ಪಕ್ಷದ ಸಂಘಟನೆಯಾಗಿಲ್ಲ ಎಂಬ ಕೊರಗು ಕೇಳಿಬರುತ್ತಿದೆ.
ಇತ್ತೀಚಿನ ಸಮೀಕ್ಷೆಗಳು ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ಭವಿಷ್ಯ ನುಡಿದಿವೆ. ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಮುಂದಾಗಿರುವ ಬಿಜೆಪಿ ನರೇಂದ್ರ ಮೋದಿಯನ್ನೇ ನೆಚ್ಚಿಕೊಂಡಿರುವುದು ಸುಳ್ಳಲ್ಲ.
ರಾಜ್ಯದಲ್ಲಿ ಮೋದಿ ಅಲೆ ಎದ್ದರೆ ಸುಲಭವಾಗಿ ದಡ ಸೇರಬಹುದೆಂಬ ನಿರೀಕ್ಷೆಯಲ್ಲಿ ಪಕ್ಷ ಇದೆ. ಈ ಹಿಂದೆ ಉತ್ತರಪ್ರದೇಶ, ಉತ್ತರಖಂಡ್, ಗುಜರಾತ್, ತ್ರಿಪುರ ಸೇರಿದಂತೆ ಅನೇಕ ಕಡೆ ಮೋದಿ ಮ್ಯಾಜಿಕ್ ಕಮಲವನ್ನು ಅರಳುವಂತೆ ಮಾಡಿತು.
ಎಲ್ಲೆಲ್ಲಿ ಪ್ರಚಾರ:
ನಾಳೆ ಕರ್ನಾಟಕಕ್ಕೆ ಆಗಮಿಸಲಿರುವ ನರೇಂದ್ರ ಮೋದಿ ಅವರು ಒಟ್ಟು ಮೂರು ಕಡೆ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಮೊದಲ ಬಹಿರಂಗ ಸಭೆ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲ್ಲೂಕಿನ ಸಂತೆಮಾರನಹಳ್ಳಿಯಲ್ಲಿ ನಡೆಯಲಿದೆ.
ಬೆಳಗ್ಗೆ 11 ಗಂಟೆಗೆ ಸಂತೆಮಾರನಹಳ್ಳಿಯ ಮೈದಾನದಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಒಟ್ಟು 22 ಅಭ್ಯರ್ಥಿಗಳ ಪರ ಪ್ರಚಾರ ನಡೆಸುವರು.
ಸುಮಾರು ಮೂರು ಜಿಲ್ಲೆಗಳಿಂದ 80ರಿಂದ ಒಂದು ಲಕ್ಷ ಕಾರ್ಯಕರ್ತರು ಸೇರುವ ಸಂಭವವಿದೆ. ನರೇಂದ್ರ ಮೋದಿ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್, ಎಂ.ಶಿವಣ್ಣ ಮತ್ತಿತರರು ಭಾಗವಹಿಸಲಿದ್ದಾರೆ.
ಮೂರು ಜಿಲ್ಲೆಗಳ ಅಭ್ಯರ್ಥಿಗಳು ಕೂಡ ಭಾಗವಹಿಸುವಂತೆ ಸೂಚಿಸಲಾಗಿದೆ.
ಸಂತೆಮಾರನಹಳ್ಳಿಯಲ್ಲಿ ಪ್ರಚಾರ ನಡೆಸಿದ ಬಳಿಕ ಮೋದಿ ಅವರು ಉಡುಪಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಎಂಜಿಎಂ ಕಾಲೇಜು ಸಮೀಪದ ಮೈದಾನದಲ್ಲಿ ಉಡುಪಿ , ಕಾರ್ಕಳ, ಕುಂದಾಪುರ, ಬೈಂದೂರು, ಭಟ್ಕಳ, ಕುಮುಟ, ಕಾರವಾರ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಪರ ಪ್ರಚಾರ ನಡೆಸುವರು.
ಇಲ್ಲಿಯೂ ಕೂಡ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಸೇರುವ ಸಂಭವವಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದಾರೆ.
ಉಡುಪಿ ಪ್ರಚಾರದ ಬಳಿಕ ನರೇಂದ್ರ ಮೋದಿ ಅವರು ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿಯಲ್ಲಿ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ನಡೆಸಲಿದ್ದಾರೆ.
ಬೆಳಗಾವಿ ಹಾಗೂ ಚಿಕ್ಕೋಡಿಯ ಒಟ್ಟು 18 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಅನಂತ್ಕುಮಾರ ಹೆಗಡೆ, ರಾಜ್ಯ ಸಭಾ ಸದಸ್ಯ ಪ್ರಭಾಕರ್ ಕೋರೆ, ಸಂಸದ ಸುರೇಶ್ ಅಂಗಡಿ ಸೇರಿದಂತೆ ಮತ್ತಿತರರು ಭಾಗವಹಿಸುವರು.
ಒಟ್ಟಿನಲ್ಲಿ ನಾಳೆ ಮೋದಿ ಆಗಮನ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಉಂಟು ಮಾಡಿದೆ.