ಮತ ಬೇಟೆಗೆ ನಾನಾ ರೀತಿಯ ಕಸರತ್ತು; ರಾಜಕೀಯ ಮುಖಂಡರು ಹರಸಾಹಸ

ಬೆಂಗಳೂರು,ಏ.29-ರಾಜ್ಯದಲ್ಲಿ ವಿಧಾನಸಭೆ ಕಾವು ದಿನದಿಂದ ದಿನಕ್ಕೆ ಏರುತ್ತಿರುವಂತೆ ಪ್ರಚಾರದ ಭರಾಟೆ ಕೂಡ ಜೋರಾಗಿದ್ದು, ಮತ ಬೇಟೆಗೆ ನಾನಾ ರೀತಿಯ ಕಸರತ್ತು ನಡೆಸಲಾಗುತ್ತಿದೆ.
ಉರಿಯುವ ಸುಡುಬಿಸಿಲು, ಸೆಕೆ, ದಾಹ ಯಾವುದನ್ನು ಲೆಕ್ಕಿಸದೆ ಮತದಾರರನ್ನು ಓಲೈಸಿಕೊಳ್ಳಲು ಎಲ್ಲ ಪ್ರಮುಖ ರಾಜಕೀಯ ಮುಖಂಡರು ಹರಸಾಹಸ ಮಾಡುತ್ತಿದ್ದಾರೆ.
ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಇಂದು ಬಿರುಸಿನ ಪ್ರಚಾರ ನಡೆಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.

ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೆಬ್ಬಾಳದಲ್ಲಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ್ ರೋಡ್ ಶೋ ಮೂಲಕ ಮತ ಯಾಚಿಸಿದರು.
ನಂತರ ಶಿವಾಜಿನಗರದಲ್ಲಿ ಕಟ್ಟಾಸುಬ್ರಹ್ಮಣ್ಯ ನಾಯ್ಡು ಸರ್.ಸಿ.ವಿ.ರಾಮನಗರದಲ್ಲಿ ಅಭ್ಯರ್ಥಿ ರಘುಪರ ಮತಯಾಚಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಮತದಾರರಲ್ಲಿ ಮನವಿ ಮಾಡಿದರು.
ಮಧ್ಯಾಹ್ನ ಮಂಡ್ಯ ಜಿಲ್ಲೆಯ ಕೆಆರ್‍ಪೇಟೆ, ಚಾಮರಾಜನಗರ, ಮೈಸೂರಿನ ನರಸಿಂಹರಾಜ ಹಾಗೂ ಕೃಷ್ಣರಾಜದಲ್ಲೂ ಬಿಎಸ್‍ವೈ ಬಿರುಸಿನ ಪ್ರಚಾರ ನಡೆಸಿದರು.
ಕೇಂದ್ರ ಸಚಿವ ಅನಂತಕುಮಾರ್ ಬೆಳಗ್ಗೆ ವಿಜಯನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಚ್.ರವೀಂದ್ರ ಪರ ಪ್ರಚಾರ ನಡೆಸಿದರೆ ಮಹಾಲಕ್ಷ್ಮಿ ಲೇಔಟ್‍ನಲ್ಲಿ ನೆ.ಲ.ನರೇಂದ್ರ ಬಾಬು, ರಾಜಾಜಿನಗರದಲ್ಲಿ ಸುರೇಶ್‍ಕುಮಾರ್ ಹಾಗೂ ಮಲ್ಲೇಶ್ವರಂನಲ್ಲಿ ಡಾ.ಅಶ್ವಥ್ ನಾರಾಯಣ್ ಪರ ಮತಯಾಚಿಸಿದರು.

ಕೇಂದ್ರದ ಮತ್ತೋರ್ವ ಸಚಿವ ಡಿ.ವಿ.ಸದಾನಂದಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರಿನಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದರೆ ಕೇಂದ್ರ ಸಾರಿಗೆ ಮತ್ತು ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಕೂಡ ಇಂದು ಪ್ರಚಾರಕ್ಕೆ ಧುಮುಕಿದರು.

ಬೆಳಗಾವಿ ಜಿಲ್ಲೆಯ ಖಾನಾಪುರ, ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಯಲ್ಲಾಪುರ ಹಾಗೂ ಕಾರವಾರದಲ್ಲಿ ಅಭ್ಯರ್ಥಿಗಳ ಪರ ರೋಡ್ ಶೋ ಮತ್ತು ಬಹಿರಂಗ ಸಮಾರಂಭಗಳ ಮೂಲಕ ಮತಯಾಚಿಸಿದರು.
ಇನ್ನು ಕಳೆದ ನಾಲ್ಕು ದಿನಗಳಿಂದ ಕರ್ನಾಟಕದಲ್ಲೇ ವಾಸ್ತವ್ಯ ಹೂಡಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದು ಕೋಲಾರ ಜಿಲ್ಲೆಯ ಕೆಜಿಎಫ್ ಹಾಗೂ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

ಇದಕ್ಕೂ ಮುನ್ನ ಬೆಳಗ್ಗೆ ಪಕ್ಷದ ಕೆಲವು ಆಯ್ದ ಮುಖಂಡರೊಂದಿಗೆ ಚುನಾವಣಾ ಪ್ರಣಾಳಿಕೆ ಹಾಗೂ ಪ್ರಚಾರ ಕುರಿತಂತೆ ಸಮಾಲೋಚನೆ ಸಭೆ ನಡೆಸಿದರು.
ರಾಜ್ಯದ ಗಮನಸೆಳೆದಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಮನೆ ಮನೆಗೆ ತೆರಳಿ ಬೆಳಗಿನಿಂದಲೇ ಪ್ರಚಾರ ನಡೆಸಿದರು.
ಕೇಂದ್ರ ಸಚಿವರಾದ ಅನಂತಕುಮಾರ್ ಹೆಗಡೆ, ಬೆಳಗಾವಿಯಲ್ಲಿ ರಮೇಶ್ ಜಿಗಜಿಣಗಿ, ವಿಜಾಪುರದಲ್ಲಿ ಬಿರುಸಿನ ಪ್ರಚಾರ ನಡೆಸುವ ಮೂಲಕ ಚುನಾವಣಾ ಕಾವು ಹೆಚ್ಚಿಸಿದ್ದಾರೆ.
ಹೀಗೆ ಬಿಜೆಪಿಯ ಘಟಾನುಘಟಿ ನಾಯಕರು ಪಕ್ಷದ ಪರ ರಣರಂಗಕ್ಕೆ ಇಳಿದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ