ಶಿವಮೊಗ್ಗ ,ಏ.26- ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ತಲೆತಿರುಕ. ಅವರ ಪಕ್ಷದಲ್ಲೇ ಹಗಲು ದರೋಡೆ ಮಾಡುವ ಭ್ರಷ್ಟರನ್ನಿಟ್ಟುಕೊಂಡು ನಮ್ಮ ಪಕ್ಷದ ಬಗ್ಗೆ ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.
ತಮ್ಮ ಟ್ವಿಟರ್ನಲ್ಲಿ ಪ್ರಧಾನಿ ಮೋದಿ, ಬಿಜೆಪಿಯ ಎಂಟು ಮಂದಿ ಭ್ರಷ್ಟರನ್ನು ವಿಧಾನಸಭೆಗೆ ಕರೆತರಲು ಮುಂದಾಗಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ಇದಕ್ಕೆ ಇಂದು ಪತ್ರಿಕಾಗೋಷ್ಟಿಯಲ್ಲಿ ತಿರುಗೇಟು ನೀಡಿರುವ ಯಡಿಯೂರಪ್ಪ, ರಾಹುಲ್ಗಾಂಧಿ ಒಬ್ಬ ತಲೆತಿರುಕನಂತೆ ಮಾತನಾಡುತ್ತಾರೆ. ರಾಜಕೀಯದಲ್ಲಿ ಒಂದಿಷ್ಟು ತಿಳಿದುಕೊಂಡು ಮಾತನಾಡುವುದು ಒಳ್ಳೆಯದು. ಅವರಿಗೆ ಏನು ಮಾತನಾಡಬೇಕೆಂಬ ಜ್ಞಾನವಿಲ್ಲ. ಇಂಥವರ ಬಗ್ಗೆ ಮಾತನಾಡುವುದೇ ವ್ಯರ್ಥ ಎಂದರು.
ಇನ್ನು ಮುಂದೆ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅಕ್ಕಪಕ್ಕ ಸೇರಿದಂತೆ ಸುತ್ತಮುತ್ತಲೂ ರಾಜ್ಯವನ್ನೇ ಲೂಟಿ ಮಾಡುವ ಭ್ರಷ್ಟರನ್ನಿಟ್ಟುಕೊಂಡು ಬಿಜೆಪಿ ಬಗ್ಗೆ ಮಾತನಾಡುವುದು ದೆವ್ವದ ಬಾಯಿಯಲ್ಲಿ ಭಗವದ್ಗೀತೆ ಬಂದಂತೆ ಎಂದರು.
ಮನೆಮುರುಕರೇ ರಾಹುಲ್ ಗಾಂಧಿ ಸುತ್ತ ಇದ್ದಾರೆ. ಇಂಥವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಬಿಜೆಪಿ ಮತ್ತು ನರೇಂದ್ರ ಮೋದಿ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗುತ್ತದೆ ಎಂಬ ಕಾರಣಕ್ಕಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನು ನಂಬಲು ರಾಜ್ಯದ ಜನತೆ ಮೂರ್ಖರೇ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಸದರು, ಶಾಸಕರು ಹಾಗೂ ಪದಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿರುವುದು ನಮ್ಮಗೆಲ್ಲರಿಗೂ ಆನೆ ಬಲ ತಂದಿದೆ. ಇನ್ನಷ್ಟು ಆತ್ಮಸ್ಥೈರ್ಯದಿಂದ ಪ್ರಚಾರ ಮಾಡುತ್ತೇವೆ ಎಂದು ಹೇಳಿದರು.
ಮೋದಿ ಅವರು ರಾಜ್ಯದಲ್ಲಿ ಮೇ 1ರಿಂದ ಅಧಿಕೃತವಾಗಿ ಪ್ರವಾಸ ಆರಂಭಿಸಲಿದ್ದಾರೆ. ಪ್ರತಿ ಕ್ಷೇತ್ರಕ್ಕೂ ಅವರೇ ಬಂದು ಪ್ರಚಾರ ನಡೆಸಬೇಕೆಂದು ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ಆದರೆ ಬಿಡುವುದಿಲ್ಲ ಕೆಲವು ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಬೇಕಾಗಿರುವುದರಿಂದ ಎಲ್ಲ ಕಡೆ ಭಾಗವಹಿಸಲು ಸಾಧ್ಯವಿಲ್ಲ. ಅಗತ್ಯವಿರುವ ಕಡೆ ಪ್ರಚಾರ ಮಾಡುತ್ತಾರೆ. ನಾನು ಕೂಡ ಅವರ ಜೊತೆ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ತಿಳಿಸಿದರು.
ಒಬ್ಬ ಪ್ರಧಾನಿ ಸಾಮಾನ್ಯ ಕಾರ್ಯಕರ್ತರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಬೇರೆ ಪಕ್ಷಗಳಲ್ಲಿ ಇದು ಸಾಧ್ಯವೇ ಎಂದು ಪ್ರಶ್ನಿಸಿದರು.