ವರುಣಾ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದ – ಎಚ್.ಡಿ.ಕುಮಾರಸ್ವಾಮಿ

ಮೈಸೂರು, ಏ.26- ವರುಣಾ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಳ ಒಪ್ಪಂದವಾಗಿದೆ. ಇದು ಜೆಡಿಎಸ್‍ಗೆ ಪ್ಲಸ್ ಪಾಯಿಂಟ್ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು ಎಂದು ಮುಖ್ಯಮಂತ್ರಿ ಹೇಳಿರುವುದಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿ ಹಣ ಬಲ, ಜಾತಿ ಬಲದಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಈ ಎರಡೂ ಪಕ್ಷಗಳ ಲೆಕ್ಕಾಚಾರ ಉಲ್ಟಾ ಹೊಡೆಯಲಿದೆ ಎಂದು ಹೇಳಿದರು. ಬಿ.ಎಸ್.ಯಡಿಯೂರಪ್ಪ ಪುತ್ರನಿಗೆ ಟಿಕೆಟ್ ತಪ್ಪಿಸುವಲ್ಲಿ ಕೆಲವರು ಸಫಲರಾಗಿದ್ದಾರೆ. ವರುಣಾದಲ್ಲಿ ಕಾಂಗ್ರೆಸ್, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ. ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದರು.
ಶೌಚಾಲಯ ಕಟ್ಟಿಸಲು ಮರಳಿಲ್ಲ. ಆದರೆ ಕೇರಳಕ್ಕೆ ನೂರಾರು ಲಾರಿ, ಮರಳು ಸಾಗಿಸಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಕರ್ನಾಟಕದ ಜತೆಗೆ ಪ್ರಧಾನಿ ನರೇಂದ್ರ ಮೋದಿಯವರು ಏನನ್ನೂ ಮಾಡಿಲ್ಲ ಎಂದು ಹೇಳಿದ ಎಚ್‍ಡಿಕೆ ಬಾದಾಮಿಯಲ್ಲಿ ಸಿದ್ದರಾಮಯ್ಯ ಹಾಗೂ ಶ್ರೀರಾಮುಲು ವಲಸಿಗರು. ಜೆಡಿಎಸ್ ಅಭ್ಯರ್ಥಿ ಸ್ಥಳೀಯರಾಗಿದ್ದು , ನಮ್ಮ ಅಭ್ಯರ್ಥಿಯೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿಸೋಲನುಭವಿಸುವ ಭಯದಲ್ಲಿ ಬದಾಮಿಗೆ ಪಲಾಯನ ಮಾಡಿದ್ದಾರೆ ಎಂದು ಇದೇ ವೇಳೆ ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಮರಿಸ್ವಾಮಿಗೆ ಸನ್ಮಾನ: ನಿನ್ನೆ ನಗರದ ಹಳೆ ಕೆಸರೆ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರದಲ್ಲಿ ತೊಡಗಿದ್ದಾಗ ಮರಿಸ್ವಾಮಿ ಎಂಬುವರನ್ನು ಕರೆದು ನೀನು ನಾನು ಹಳೆಯ ಸ್ನೇಹಿತರು ಬಾ ಎಂದು ಹೇಳಿದರು.
ಅದಕ್ಕೆ ಮರಿಸ್ವಾಮಿ ನಾನು ಜೆಡಿಎಸ್‍ನ ನಿಷ್ಠಾವಂತ ಕಾರ್ಯಕರ್ತ ನಿಮಗೆ ಮತ ಹಾಕುವುದಿಲ್ಲ ಎಂದಿಗೂ ಜೆಡಿಎಸ್‍ಗೆ ಮತ ಹಾಕುತ್ತೇನೆ ಎಂದು ಟಾಂಗ್ ನೀಡಿದ್ದರು.
ಇದೇ ಸಂದರ್ಭದಲ್ಲಿಈ ಹಿನ್ನೆಲೆಯಲ್ಲಿ ಇಂದು ತಾವು ತಂಗಿದ್ದ ಖಾಸಗಿ ಹೊಟೇಲ್‍ಗೆ ಮರಿಸ್ವಾಮಿಯನ್ನು ಕರೆಸಿಕೊಂಡು ಕುಮಾರಸ್ವಾಮಿಯವರು ಮೈಸೂರು ಪೇಟ ತೊಡಿಸಿ ಹಾರ ಹಾಕಿ ಸನ್ಮಾನ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ