ನವದೆಹಲಿ,ಆ.4-ಕೊರೊನಾ ಸೋಂಕಿನ ಪ್ರಮಾಣದಲ್ಲಿ ಹಾವು-ಏಣಿ ಆಟ ಮುಂದುವರೆದಿದೆ. ನಿನ್ನೆಯಷ್ಟೆ 30 ಸಾವಿರದಷ್ಟಿದ್ದ ಸೋಂಕಿನ ಸಂಖ್ಯೆ ಇಂದು ದಿಢೀರ್ 42,625ಕ್ಕೆ ಏರಿಕೆಯಾಗಿದೆ.
ಇಂದಿನ ಏರಿಕೆಯಿಂದಾಗಿ ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,17,625 ಕೋಟಿಯಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಉಲ್ಲೇಖಿಸಿವೆ.
ನಿನ್ನೆಯಿಂದ 562 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಕೊರೊನಾ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 4,25,757 ಲಕ್ಷಕ್ಕೆ ಹೆಚ್ಚಳವಾಗಿದೆ.
ಸೋಂಕಿನ ಪ್ರಮಾಣದಲ್ಲಿ ಏರಿಳಿಕೆಯಾಗುತ್ತಿರುವುದರ ಜತೆಗೆ ಕಳೆದ 24 ಗಂಟೆಗಳಲ್ಲಿ ಹೆಚ್ಚುವರಿ 5395 ಮಂದಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 4,10,353 ಲಕ್ಷಕ್ಕೆ ಹೆಚ್ಚಳಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ನಿನ್ನೆ ಒಂದೇ ದಿನ 18 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರೊಂದಿಗೆ ದೇಶದ 47 ಕೋಟಿಗೂ ಹೆಚ್ಚು ಮಂದಿಯ ಕೊರೊನಾ ಪರೀಕ್ಷೆ ನಡೆಸಿದಂತಾಗಿದೆ.
ದಿನದ ಕೊರೊನಾ ಪಾಸಿಟಿವಿಟಿ ದರ ಶೇ.2.31ಕ್ಕೆ ಸೀಮಿತಗೊಂಡಿದ್ದರೆ, ವಾರದ ಪಾಸಿಟಿವಿಟಿ ರೇಟ್ ಶೇ.2.36 ರಷ್ಟಿದೆ.
3.17 ಕೋಟಿ ಸೋಂಕಿತರ ಪೈಕಿ ಈಗಾಗಲೇ 3.09 ಕೋಟಿಯಷ್ಟು ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.
ಸೋಂಕು ಹೆಚ್ಚಳಗೊಳ್ಳುತ್ತಿದ್ದಂತೆ ಲಸಿಕೆ ಹಾಕಿಸಿಕೊಳ್ಳಲು ಜನ ಮುಗಿಬಿಳುತ್ತಿದ್ದು, ಇದುವರೆಗೂ 48.52 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ.
ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 562 ಮಂದಿ ಬಲಿಯಾಗಿದ್ದು, ಇದರಲ್ಲಿ ಸೋಂಕು ಹೆಚ್ಚಳಗೊಳ್ಳುತ್ತಿರುವ ಮಹಾರಾಷ್ಟ್ರದಲ್ಲಿ 177 ಹಾಗು ಕೇರಳದಲ್ಲಿ 148 ಮಂದಿ ಸಾವನ್ನಪ್ಪಿರುವುದು ಉಲ್ಲೇಖಾರ್ಹ.
ಕೊರೊನಾ ಸೋಂಕಿನಿಂದ ಮೃತಪಟ್ಟ 4,25 ಲಕ್ಷ ಮಂದಿಯಲ್ಲಿ ಶೇ.70 ರಷ್ಟು ಮಂದಿ ಇನ್ನಿತರ ಕಾಯಿಲೆಗಳಿಂದ ನರಳುತ್ತಿದ್ದವರೆ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.