ಪೇಗಾಸಸ್ ಬೇಹುಗಾರಿಕೆ ಹಗರಣದಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪದಲ್ಲಿ ಗದ್ದಲ: ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆ

ನವದೆಹಲಿ, ಜು.23- ಪೇಗಾಸಸ್ ಬೇಹುಗಾರಿಕೆ ಹಗರಣದಿಂದಾಗಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪದಲ್ಲಿ ಗದ್ದಲ, ಕೋಲಾಹಲ ಮುಂದುವರೆದಿದ್ದು, ಲೋಕಸಭೆ ಅಧಿವೇಶನ ಸೋಮವಾರಕ್ಕೆ ಮುಂದೂಡಿದೆ. ಟಿಎಂಸಿ ಸದಸ್ಯರೊಬ್ಬರನ್ನು ಅಮಾನತುಗೊಳಿಸಲಾಗಿದೆ.

ರಾಜ್ಯಸಭೆಯಲ್ಲಿ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ ಬಳಿಕವೂ ಗದ್ದಲ ಮುಂದುವರೆದಿದೆ.

ಗುರುವಾರ ಪೆಗಾಸಸ್ ಗದ್ದಲಕ್ಕೆ ಉಭಯ ಸದನಗಳು ಮುಂದೂಡಿಕೆಯಾಗಿದ್ದವು. ಕೇಂದ್ರ ಸರ್ಕಾರ ರೂಪಿಸಿರುವ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿಯೂ ಈ ಸಂದರ್ಭದಲ್ಲಿ ಪ್ರತಿಭಟನೆ ನಡೆದಿತ್ತು.

ಸತವಾಗಿ ನಾಲ್ಕನೇ ದಿನವೂ ಕೂಡ ಸದನದಲ್ಲಿ ಚರ್ಚೆಗೆ ಅವಕಾಶವಾಗದೆ ಗಲಾಟೆ ಗದ್ದಲಗಳೇ ಹೆಚ್ಚಾಗಿದ್ದವು. ಮಾಹಿತಿ ಮತ್ತು ತಂತ್ರಜ್ಞಾನ ಸಚಿವರ ಕೈನಿಂದ ಪೆಪರ್ ಕಸಿದು ಹರಿದು ಹಾಕಿದ ಆರೋಪಕ್ಕೆ ಗುರಿಯಾಗಿರುವ ಟಿಎಂಸಿಯ ಸಂಸದನನ್ನು ಇಂದು ಅಮಾನತುಗೊಳಿಸಲಾಗಿತ್ತು. ರಾಜ್ಯಸಭೆ ಹಲವು ಬಾರಿ ಮುಂದೂಡಿಕೆಯಾಗಿತ್ತು. ಲೋಕಸಭೆ ಸೋಮವಾರದವರೆಗೂ ಮುಂದೂಡಿಕೆಯಾಗಿದೆ.

ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ರಾಹುಲ್‍ಗಾಂಧಿ ಪೆಗಾಸಸ್ ಸಾಫ್ಟವೇರ್ ಅನ್ನು ಇಸ್ರೇಲ್ ಭಯೋತ್ಪಾದಕರ ವಿರುದ್ಧ ಆಯುಧವಾಗಿ ಬಳಕೆ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅದನ್ನು ನಮ್ಮ ವಿರುದ್ಧ ಬಳಸಿದ್ದಾರೆ. ಇದು ತನಿಖೆಯಾಗಬೇಕು ಮತ್ತು ಗೃಹ ಸಚಿವರು ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ