ಬಕ್ರೀದ್‍ಗಾಗಿ ಆಡು ಬಲಿಕೊಡುವುದನ್ನು ಕೈಬಿಡಿ: ಮುಸ್ಲಿಂ ಮುಖಂಡರಿಂದ ಸಮುದಾಯಕ್ಕೆ ಆಗ್ರಹ

ಹೊಸದಿಲ್ಲಿ :ಬಕ್ರೀದ್ ಸಂದರ್ಭ ಮುಸ್ಲಿಂ ಸಮುದಾಯ ಆಡುಗಳನ್ನು ಬಲಿಕೊಡುವುದನ್ನು ನಿಲ್ಲಿಸಬೇಕೆಂದು ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಶಿರಾಜ್ ಖುರೇಷಿ ಅವರು ಮುಸ್ಲಿಂ ವಿದ್ವಾಂಸರೊಡಗೂಡಿ ಸಮುದಾಯವನ್ನು ಬಕ್ರೀದ್‍ನ ಮುನ್ನಾದಿನ ಆಗ್ರಹಿಸಿದ್ದಾರೆ. ಕ್ರೌರ್ಯದ ಹಿನ್ನೆಲೆಯಲ್ಲಿ ಅನೇಕ ಮುಸ್ಲಿಮರು ತಾವು ಆಡಿನ ಮಾಂಸ ಸೇವನೆಯನ್ನು ತ್ಯಜಿಸಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ.

ಗೋವಿನ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಶಿರಾಜ್ ಖುರೇಷಿ ಅವರು ಹಜ್ ಹೌಸ್‍ನ ಇಮಾಮ್ ಹಫೀಜ್ ಸಬ್ರಿನ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಖ್ಯಾತ ಇಸ್ಲಾಮಿಕ್ ಮತ್ತು ಮರ್ಷಿಯನ್ ಪಂಡಿತರಾದ ಡಾ.ಇಮ್ರಾನ್ ಚೌಧರಿ ಜೊತೆಗೂಡಿ ದಿಲ್ಲಿಯ ಹಜ್ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಆಗ್ರಹಿಸಿದ್ದಾರೆ.ಮುಸ್ಲಿಮರ ಅತ್ಯಂತ ದೊಡ್ಡ ಹಬ್ಬಗಳಲ್ಲೊಂದಾದ ಬಕ್ರೀದ್ ಹಿನ್ನೆಲೆಯಲ್ಲಿ ಅವರು ಈ ಆಗ್ರಹ ಮಾಡಿದ್ದು, ಕ್ರೌರ್ಯವನ್ನು ಇಸ್ಲಾಮ್ `ಹರಾಮ್ ‘ಎನ್ನುತ್ತದೆ. ಹೀಗಿರುವ ಪ್ರಾಣಿಗಳ ಹತ್ಯೆ, ಸಾಗಣೆ, ಹತ್ಯೆಗಳು ಹೇಗೆ ಸರಿಯಾಗಲು ಸಾಧ್ಯ?ಪ್ರಾಣಿಗಳ ಮಾಂಸ ಅಶುದ್ಧ ಮತ್ತು ಅವನ್ನು ಭಕ್ಷಿಸುವುದು ಒಟ್ಟಾರೆ ನಮ್ಮ ಒಳಿತಿನ ಹಿನ್ನೆಲೆಯಲ್ಲಿ ಸಲ್ಲದು ಎಂದರು.

ಕುರಾನ್ ಯಾವುದನ್ನು ನಿಷೇಧ ಎಂದಿದೆ ಎಂಬುದನ್ನು ವಿವರಿಸಿದ ಅವರು, ಪ್ರಾಣಿಗಳನ್ನು ಕ್ರೂರ ರೀತಿಯಲ್ಲಿ ಕೊಲ್ಲುವುದನ್ನು `ಹರಾಮ್ ‘ಎಂದಿದೆ.ಅಕ್ರಮ ಕಸಾಯಿ ಕೃತ್ಯ ಕಾನೂನು ಬಾಹಿರ ಕೃತ್ಯ. ತೆಲಂಗಾಣ ರಾಜ್ಯ ಗೋಹತ್ಯಾ ನಿಷೇಧ ಕಾನೂನು ಮತ್ತು ಪ್ರಾಣಿ ಸಂರಕ್ಷಣಾ ಕಾಯ್ದೆ 1977ರ ವಿ (3,5,6,10,11)ಪಿಸಿಎ ಆ್ಯಕ್ಟ್ 1960(ವಿ 11,38), ಪ್ರಾಣಿಗಳ ಸಾಗಣೆ ಕಾಯ್ದೆ1978(ವಿ 56 ಎ, ಬಿ,ಸಿ)ನಿಯಮಗಳು ಮತ್ತು ಐಪಿಸಿ 428 ಮತ್ತು 429ರಡಿ `ಸ್ಲಾಟರ್‍ಹೌಸ್ ಮಾಫಿಯಾ’ ಚಟುವಟಿಕೆಗಳು ಅಕ್ರಮ ಮತ್ತು ಭಾರತೀಯ ಕಾನೂನಿನಡಿ ಶಿಕ್ಷಾರ್ಹ ಎಂಬುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದರು.

ನಟಿ ಸದಾ ಸಯದ್ ತಾನು ಮಟನ್ ಸೇವನೆಯನ್ನು 8ರ ಪ್ರಾಯದಲ್ಲಿರುವಾಗಲೇ ಬಿಟ್ಟಿರುವ ಬಗ್ಗೆ ಹೇಳಿರುವುದನ್ನು ಅವರು ಉಲ್ಲೇಖಿಸಿದರು. ಆಡನ್ನು ಬಲಿಕೊಡುವ ವೇಳೆ ಕ್ರೌರ್ಯ ನನ್ನ ಮೇಲೆ ತೀವ್ರ ಪರಿಣಾಮ ಬೀರಿತ್ತು.ಆ ಬಳಿಕ ಈದ್ ಸಂದರ್ಭ ಸಸ್ಯಾಹಾರ ಆಹಾರ ಪ್ಯಾಕೇಜ್‍ಗಳನ್ನು ತಾನು ಹಂಚುತ್ತಾ ಬಂದಿರುವ ಬಗ್ಗೆ ಆಕೆ ಹೇಳಿರುವುದನ್ನೂ ಅವರು ಬೊಟ್ಟು ಮಾಡಿದರು .

ಆಡು ಬಲಿಕೊಡಬೇಕಾದುದು ಕಡ್ಡಾಯವೇನಲ್ಲ ಎಂದು ಕೆಲವು ಮುಸ್ಲಿಮರು ಅಭಿಪ್ರಾಯಪಡುತ್ತಿದ್ದು , ಇದರ ಬದಲಿಗೆ ಬಡವರಿಗಾಗಿ ಒಂದು ಹೊತ್ತಿನ ಊಟವನ್ನು ತ್ಯಾಗ ಮಾಡುವುದು ಒಳ್ಳೆಯದು ಎಂದು ಇಸ್ಲಾಮಿಕ್ ಪಂಡಿತ ಡಾ.ಇಮ್ರಾನ್ ಚೌಧರಿ ಹೇಳಿದರು. ಹಾಗೆಯೇ ಈದ್ ಸಂದರ್ಭ ತಮ್ಮ ಕೆಟ್ಟ ಹವ್ಯಾಸಗಳನ್ನು ತ್ಯಜಿಸಬಹುದಾಗಿದೆ , ಸಮಾಜಕ್ಕಾಗಿ ಮತ್ತು ಪರಿಸರ ರಕ್ಷಣೆಗಾಗಿ ನಾವು ಅನೇಕ ರೀತಿಯಲ್ಲಿ ತ್ಯಾಗಗಳನ್ನು ಮಾಡಲು ಅವಕಾಶವಿದೆ ಎಂದರು.

ಮುಸ್ಲಿಂ ರಾಷ್ಟ್ರೀಯ ಮಂಚ್‍ನ ಸದಸ್ಯರೂ ಆಗಿರುವ ಖುರೇಷಿ ಅವರು ಚೌಧರಿಯವರೊಡಗೂಡಿ ಗೋರಕ್ಷಣೆಗಾಗಿ ಶ್ರಮಿಸುತ್ತಿದ್ದು, ಇತ್ತೀಚೆಗೆ ಕಾಮಧೇನು ಗೋಶಾಲೆಗೆ ಗೋವುಗಳನ್ನು ದಾನವಾಗಿ ನೀಡಿದ್ದರು. ಹಿಂದುಗಳು ಮುಸ್ಲಿಮರ ರಮ್ಜಾನ್ ಉಪವಾಸ ಪದ್ಧತಿಯನ್ನು ಗೌರವಿಸುವ ರೀತಿಯಲ್ಲೇ ಮುಸ್ಲಿಮರೇಕೆ ಹಿಂದುಗಳು ಪೂಜಿಸುವ ಗೋವನ್ನು ಗೌರವಿಸಬಾರದು?ಕುರಾನ್‍ನ ಅತಿದೊಡ್ಡ ಅಧ್ಯಾಯ ಗೋ ರಕ್ಷಣೆ ಮತ್ತು ಕಲ್ಯಾಣವನ್ನು ಉತ್ತೇಜಿಸುವಂತಹದ್ದಾಗಿದೆ ಎಂಬುದನ್ನೂ ಅವರು ಮುಸ್ಲಿಮರಿಗೆ ನೆನಪಿಸಿದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ