ನವದೆಹಲಿ,ಜು.17-ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಮಹತ್ವಾಕಾಂಕ್ಷೆಯ ಕುಡಿಯುವ ನದಿನೀರು ಯೋಜನೆಗೆ ಕೇಂದ್ರ ಸರ್ಕಾರ ಒಂದೇ ವಾರದಲ್ಲಿ ಉಲ್ಟಾ ಹೊಡೆದಿದೆ.
ಏಕೆಂದರೆ ನಾಲ್ಕು ದಿನಗಳ ಹಿಂದಷ್ಟೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು, ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಯೋಜನೆಗೆ ಕೇಂದ್ರದಿಂದ ಎಲ್ಲ ರೀತಿಯ ನೆರವು ನೀಡುವ ಆಶ್ವಾಸನೆ ನೀಡಿದ್ದರು.
ಇದೀಗ ಅವರೇ ಹೇಳಿರುವಂತೆ ಮೇಕೆದಾಟು ಯೋಜನೆಯನ್ನು ಕರ್ನಾಟಕ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯೂಎಂಎ)ದ ಒಪ್ಪಿಗೆ ಪಡೆಯದೆ ಕಾಮಗಾರಿಯನ್ನು ಆರಂಭಿಸಲು ಸಾಧ್ಯವೇ ಇಲ್ಲ ಎಂದು ತಮಿಳುನಾಡು ಸರ್ಕಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಈ ಮೂಲಕ ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಪರೋಕ್ಷವಾಗಿ ಕರ್ನಾಟಕಕ್ಕೆ ಸುಣ್ಣ, ತಮಿಳುನಾಡಿಗೆ ಬೆಣ್ಣೆ ಹಚ್ಚುವ ಹುನ್ನಾರವನ್ನು ವ್ಯವಸ್ಥಿತವಾಗಿ ನಡೆಸಿರುವುದು ಸ್ಪಷ್ಟವಾಗಿದೆ.
ತಮಿಳುನಾಡು ನೀರಾವರಿ ಸಚಿವ ಎಸ್.ದೊರೆಮುರುಗನ್ ನೇತೃತ್ವದ ಸರ್ವಪಕ್ಷ ನಿಯೋಗ ಮೇಕೆದಾಟು ಯೋಜನೆಯ ಕಾಮಗಾರಿಯನ್ನು ಆರಂಭಿಸದಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ಸಚಿವ ಶೇಖಾವತ್ಗೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿರುವ ಸಚಿವರು, ಮೇಕೆದಾಟು ಯೋಜನೆ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯು ಇನ್ನು ಅನುಮತಿ ನೀಡಿಲ್ಲ. ಅಲ್ಲದೆ ಇದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ವ್ಯಾಪ್ತಿಗೆ ಬರಲಿದೆ. ಇದರ ಅನುಮತಿಯಿಲ್ಲದೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಕರ್ನಾಟಕದ ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ರೀತಿಯಿಂದಲೂ ಧಕ್ಕೆಯಾಗದು. ಹೀಗಾಗಿ ಈ ಯೋಜನೆಗೆ ಅಡ್ಡಿಪಡಿಸಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಪತ್ರ ಬರೆದಿದ್ದರು.
ವಿದ್ಯುತ್ ಉತ್ಪಾದನೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದ ಕಾರಣ ಸುಪ್ರೀಂ ಆದೇಶದನ್ವಯ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ. ಯೋಜನೆಯಿಂದ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಅವಕಾಶವಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ 4.75 ಟಿಎಂಸಿ ನೀರನ್ನು ಕೊಂಡೊಯ್ಯುವುದಕ್ಕೂ ಅನುಮತಿ ನೀಡಲಾಗಿತ್ತು. ಈ ಯೋಜನೆ ಎರಡೂ ರಾಜ್ಯಕ್ಕೆ ಉಪಯುಕ್ತವಾಗಲಿದೆ. ಜತೆಗೆ ಯೋಜನೆಯಿಂದ ತಮಿಳುನಾಡಿನ ರೈತರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದರು.
ಪತ್ರದಲ್ಲಿ ಈಗಾಗಲೇ ತಮಿಳುನಾಡು ಸರ್ಕಾರದಿಂದ ಸುಪ್ರೀಂಗೆ ಅರ್ಜಿ ಸಲ್ಲಿಸಿರುವುದನ್ನು ಉಲ್ಲೇಖಿಸಿರುವ ಯಡಿಯೂರಪ್ಪ ಅವರು, ನಾವೂ ಯೋಜನೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರದ ಮುಂದೆ ಮನವಿ ಸಲ್ಲಿಸಿದ್ದೇವೆ. ತಮಿಳುನಾಡು ಸರ್ಕಾರ ಕಾವೇರಿ ನೀರು ಬಳಸಿ ಪವರ್ ಪ್ರಾಜೆಕ್ಟ್ ಆರಂಭಿಸಲು ನಿರ್ಧರಿಸಿದೆ. ಎರಡೂ ರಾಜ್ಯದ ನಡುವೆ ಸಾಮರಸ್ಯ ಮುಂದುವರಿಯಲಿ. ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ಅಡ್ಡಿ ಬೇಡ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.