ಹೊಸದಿಲ್ಲಿ :ದೇಶದಲ್ಲಿ ಸಮಾನ ನಾಗರಿಕ ನೀತಿ ಸಂಹಿತೆಯನ್ನು ಜಾರಿಗೆ ತರುವಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಸೂಚಿಸಿದೆ.
ಮೀನಾ ಸಮುದಾಯಕ್ಕೆ ಸೇರಿದ ದಂಪತಿಗೆ ಸಂಬಂಸಿ 1955ರ ಹಿಂದು ವಿವಾಹ ಕಾಯ್ದೆಯನ್ನು ಅನ್ವಯಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ಮೇಲೆ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್, ದೇಶದಲ್ಲಿ ಸಮಾನ ನಾಗರಿಕ ನೀತಿ ಸಂಹಿತೆಯನ್ನು ಜಾರಿಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಆಗ್ರಹಪೂರ್ವಕವಾಗಿ ಸೂಚಿಸಿದೆ.
ಇಂದು ವಿಭಿನ್ನ ಸಮುದಾಯ, ಬುಡಗಟ್ಟು, ಜಾತಿ, ಮತಗಳಿಗೆ ಸೇರಿದ ಯುವಕ-ಯುವತಿಯರು ಮದುವೆಯಾಗುವ ವೇಳೆ, ವಿವಿಧ ವೈಯಕ್ತಿಕ ಕಾನೂನುಗಳಡಿ ಅವರು ತಮ್ಮ ಮದುವೆಯನ್ನು ಸಂಘರ್ಷಗಳೊಂದಿಗೆ ಎದುರಿಸುವಂತಹ ಸನ್ನಿವೇಶ ಸೃಷ್ಟಿಯಾಗುತ್ತದೆ. ವಿಶೇಷವಾಗಿ ಮದುವೆ, ವಿಚ್ಛೇದನ ಮತ್ತು ಆಸ್ತಿ ಹಕ್ಕುಗಳಿಗೆ ಸಂಬಂಸಿ ಸಮಸ್ಯೆಗಳು ಉದ್ಭವವಾಗುತ್ತವೆ. ಇದನ್ನು ಪರಿಹರಿಸುವಲ್ಲಿ ಸಮಾನ ನಾಗರಿಕ ನೀತಿ ಸಂಹಿತೆಯೇ ಪರಿಹಾರ ಎಂದು ನ್ಯಾಯಾಲಯ ಹೇಳಿದೆ.
ಸಂವಿಧಾನದ 44ನೇ ವಿ ತನ್ನೆಲ್ಲ ನಾಗರಿಕರಿಗೆ ಸಮಾನ ನಾಗರಿಕ ಸಂಹಿತೆಯನ್ನು ಖಾತ್ರಿ ಪಡಿಸುತ್ತದೆ. ಆದರೆ ಇದು ಕೇವಲ ಭರವಸೆಯಾಗಿ ಉಳಿಯಬಾರದು. ಸರ್ವೋಚ್ಚ ನ್ಯಾಯಾಲಯವು 1985ರಲ್ಲಿ ಮಿಸ್. ಜೋರ್ಡಾನ್ ಡೀಂಗ್ಡೇ ಪ್ರಕರಣದ ಸಂದರ್ಭದಲ್ಲೂ ಕೇಂದ್ರ ಸರಕಾರಕ್ಕೆ ಸಮಾನ ನಾಗರಿಕ ನೀತಿ ಸಂಹಿತೆಯನ್ನು ಜಾರಿಗೊಳಿಸುವಂತೆ ನಿರ್ದೇಶನ ನೀಡಿತ್ತು. ಆದರೆ ಮೂರು ದಶಗಳು ಕಳೆದರೂ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ನ್ಯಾ.ಪ್ರತಿಭಾ ಎಂ.ಸಿಂಗ್ ಶುಕ್ರವಾರ ನೀಡಿದ ತಮ್ಮ ಆದೇಶದಲ್ಲಿ ಬೊಟ್ಟು ಮಾಡಿದ್ದಾರೆ.
ತಮ್ಮ ಈ ಆದೇಶವನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಇಲಾಖೆಯ ಕಾರ್ಯದರ್ಶಿಯವರಿಗೆ ತಲುಪಿಸಿ ಅವರು ಇದನ್ನು ಸೂಕ್ತವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗುವಂತೆಯೂ ದಿಲ್ಲಿ ಹೈಕೋರ್ಟ್ ಆದೇಶಿಸಿದೆ. ತನ್ನ ಪತಿಯಿಂದ ಸಲ್ಲಿಸಲ್ಪಟ್ಟಿರುವ ವಿಚ್ಛೇದನ ಅರ್ಜಿಗೆ ಪ್ರತಿಕ್ರಿಯಿಸಿರುವ ಪತ್ನಿ, ನಾವು ರಾಜಸ್ತಾನದಲ್ಲಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ಸದಸ್ಯರಾಗಿದ್ದು, ಕಾಯ್ದೆಯ ವಿ 2(2)ರಡಿ ನಮಗೆ ಇದು ಅನ್ವಯವಾಗುವುದಿಲ್ಲ ಎಂದು ಹೇಳಿಕೊಂಡಿದ್ದಳು.
ಈ ರೀತಿ ವೈಯಕ್ತಿಕ ಕಾನೂನುಗಳಡಿ ಸಮಸ್ಯೆಗಳು ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯವು ಪದೆ ಪದೆ ಸಮಾನ ನಾಗರಿಕ ನೀತಿ ಸಂಹಿತೆ ಜಾರಿಗೊಳಿಸುವಂತೆ ಸೂಚಿಸುತ್ತಿದ್ದು, ಇಂತಹ ಎಲ್ಲರಿಗೂ ಸಮಾನವಾಗಿ ಅನ್ವಯವಾಗುವ ಸಂಹಿತೆಯೊಂದರ ತುರ್ತು ಅಗತ್ಯ ಇಂದಿದೆ ಎಂದು ನ್ಯಾಯಾಧೀಶರು ಒತ್ತಿ ಹೇಳಿದರು.