2ಕ್ಕಿಂತ ಹೆಚ್ಚು ಮಕ್ಕಳಿದ್ದವರು ಚುನಾವಣಾ ಸ್ಪರ್ಧೆ ಅವಕಾಶ, ಉದ್ಯೋಗ, ಮುಂಬಡ್ತಿಗೆ ಅನರ್ಹರು

ಲಖನೌ: ಚೀನಾ ಬಳಿಕ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶವಾದ ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ ಕಾನೂನಿನ ಬಗ್ಗೆ ಎಲ್ಲೆಡೆಯಿಂದ ಆಗ್ರಹ ವ್ಯಕ್ತವಾಗುತ್ತಿರುವಾಗಲೇ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕಾಗಿ ಹೊಸ ಮಸೂದೆಯನ್ನು ಜಾರಿಗೊಳಿಸುವ ಪ್ರಸ್ತಾವನೆ ಮುಂದಿಟ್ಟಿದ್ದು, ಎರಡು ಮಕ್ಕಳ ನಿಯಮವನ್ನು ಉತ್ತೇಜಿಸಲಾಗುವುದು ಎಂದು ಪ್ರಕಟಿಸಲಾಗಿದೆ.

ಈ ಪ್ರಸ್ತಾವನೆಯಂತೆ, ಎರಡಕ್ಕಿಂತ ಹೆಚ್ಚು ಮಕ್ಕಳಿರುವವರು ಸ್ಥಳೀಯ ಮಟ್ಟದಲ್ಲಿ ಚುನಾವಣೆಗೆ ಸ್ಪರ್ಧಿಸುವುದು, ಸರ್ಕಾರಿ ಉದ್ಯೋಗಕ್ಕೆ ಅನರ್ಹರೆನಿಸುತ್ತಾರೆ ಹಾಗೂ ಈಗಾಗಲೇ ಸರ್ಕಾರಿ ಉದ್ಯೋಗದಲ್ಲಿದ್ದರೆ ಮುಂಬಡ್ತಿಗೆ, ಸರ್ಕಾರದಿಂದ ಸಿಗುವ ಸಬ್ಸಿಡಿಗಳಿಗೂ ಅವರು ಅನರ್ಹರಾಗಲಿದ್ದಾರೆ.

ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗ (ಯುಪಿಎಸ್‍ಎಲ್ ಸಿ) ಈ ಬಗ್ಗೆ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಿಸಿದ್ದು, ಈ ಅಂಶಗಳು ಉತ್ತರ ಪ್ರದೇಶ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ-2021 ರ ಭಾಗವಾಗಿದೆ. ಮಸೂದೆಯಲ್ಲಿನ ಸುಧಾರಣೆಗಾಗಿ ಸಾರ್ವಜನಿಕರು ಸಲಹೆಗಳನ್ನು ನೀಡಬಹುದಾಗಿದ್ದು ಇದಕ್ಕಾಗಿ ಜು.19 ಕೊನೆಯ ದಿನವೆಂದು ತಿಳಿಸಲಾಗಿದೆ.

2ಮಕ್ಕಳ ನೀತಿ ಅಳವಡಿಸಿಕೊಂಡ ನೌಕರರಿಗೆ ಪ್ರೋತ್ಸಾಹಕ ಕೊಡುಗೆ
ಇದೇ ವೇಳೆ ರಾಜ್ಯದಲ್ಲಿ ಎರಡು ಮಕ್ಕಳ ನೀತಿಯನ್ನು ಅಳವಡಿಸಿಕೊಂಡ ಸರ್ಕಾರಿ ಸೇವೆಯಲ್ಲಿರುವ ನೌಕರರಿಗೆ ಅವರ ಸೇವಾವಯುದ್ದಕ್ಕೂ ಹೆಚ್ಚುವರಿಯಾಗಿ ಎರಡು ಇನ್‍ಕ್ರಿಮೆಂಟ್ ಗಳು, ವೇತನ, ಭತ್ಯೆಗಳ ಸಹಿತವಾಗಿ 12 ತಿಂಗಳ ಫೋಷಕರ ರಜೆ (ಮಾತೃತ್ವ ಅಥವ ಪಿತೃತ್ವ ರಜೆ)ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ ಉದ್ಯೋಗಿಗಳ ಕೊಡುಗೆಯಲ್ಲಿ ಶೇ.3 ರಷ್ಟು ಏರಿಕೆಯ ಸೌಲಭ್ಯಗಳ ಕೊಡುಗೆಯನ್ನು ಪ್ರಸ್ತಾವಿಸಲಾಗಿದೆ. ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವುದಕ್ಕಾಗಿ ರಾಜ್ಯ ಜನಸಂಖ್ಯೆ ನಿಯನ್ನು ಸ್ಥಾಪಿಸಲಾಗುತ್ತದೆ.

ಸರ್ಕಾರದ ಕರ್ತವ್ಯಗಳನ್ನು ಪಟ್ಟಿ ಮಾಡಲಾಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತೃತ್ವ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಕರಡು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಈ ಕೇಂದ್ರಗಳು ಮತ್ತು ಎನ್‍ಜಿಒಗಳಲ್ಲಿ ಕುಟುಂಬ ಯೋಜನೆ ವಿಧಾನಗಳಿಗೆ ಅಗತ್ಯವಿರುವ ಗರ್ಭನಿರೋಧಕ ಸಾಧನಗಳ ಒದಗಣೆಗೆ ಕ್ರಮ ಕೈಗೊಳ್ಳಲಾಗುವುದು. ರಾಜ್ಯಾದ್ಯಂತ ಸಮುದಾಯ ಆರೋಗ್ಯ ಕಾರ್ಯಕರ್ತರ ಮೂಲಕ ಗರ್ಭಧಾರಣೆ, ಹೆರಿಗೆ, ಜನನ ಮತ್ತು ಮರಣಗಳ ನೋಂದಣಿಯನ್ನು ಮಾಡಲಾಗುವುದು.ಅಲ್ಲದೆ ಎಲ್ಲ ಸೆಕೆಂಡರಿ ಶಾಲೆಗಳಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಸಿದ ವಿಷಯವನ್ನು ಪಠ್ಯಗಳಲ್ಲಿ ಕಡ್ಡಾಯಗೊಳಿಸಲೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಈ ಕ್ರಮದ ಅಗತ್ಯವನ್ನು ವಿವರಿಸಿರುವ ಉತ್ತರಪ್ರದೇಶದ ಕಾನೂನು ಆಯೋಗವು, ರಾಜ್ಯವು ಸೀಮಿತ ಪಾರಿಸರಿಕ ಮತ್ತು ಆರ್ಥಿಕ ಸಂಪನ್ಮೂಗಳನ್ನು ಹೊಂದಿದ್ದು, ರಾಜ್ಯದ ಎಲ್ಲ ಪ್ರಜೆಗಳಿಗೂ ಆಹಾರ ಒದಗಣೆ, ಸುರಕ್ಷಿತ ಕುಡಿಯುವ ನೀರು, ಸೂಕ್ತ ವಸತಿ, ಗುಣಮಟ್ಟದ ಶಿಕ್ಷಣ, ಆರ್ಥಿಕ, ಬದುಕಿಗೆ ಸೂಕ್ತ ಉದ್ಯೋಗಾವಕಾಶ, ವಿದ್ಯುತ್ ಸೌಕರ್ಯ, ಸುರಕ್ಷಿತ ಬದುಕು ಸೇರಿದಂತೆ ಜನರ ಕಲ್ಯಾಣಕ್ಕಾಗಿ ಜನಸಂಖ್ಯಾ ನಿಯಂತ್ರಣ ಅಥವಾ ಜನಸಂಖ್ಯಾ ಸ್ಥಿರೀಕರಣ ಅಗತ್ಯವಿದೆ ಎಂದು ವಿವರಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ