ಕೋಲಾರದಲ್ಲಿ ಪವರ್ ಟ್ರಾನ್ಸ್‍ಫಾರ್ಮರ್ ಅಗ್ನಿಗಾಹುತಿ

ಕೋಲಾರ: ಇಡೀ ಜಿಲ್ಲೆಗೆ ವಿದ್ಯುತ್ ಪೂರೈಸುವ ಕೆಪಿಟಿಸಿಎಲ್‍ನ 220 ಕೆವಿ.ಸ್ಟೇಷನ್‍ನ 110 ಎಂ.ವಿ.ಎ ಪವರ್ ಸ್ವೀಕರಣಾ ಟ್ರಾನ್ಸ್‍ಫಾರ್ಮರ್ ಆಕಸ್ಮಿಕವಾಗಿ ಅಗ್ನಿಗೆ ಆಹುತಿಯಾಗಿ ಸುಮಾರು 5 ಕೋಟಿಗೂ ಅಕ ನಷ್ಟ ಸಂಭವಿಸಿದೆ ಮತ್ತು ದಟ್ಟ ಹೊಗೆ ಆಕಾಶದೆತ್ತರಕ್ಕೆ ಆವರಿಸಿದ್ದು, ಜಿಲ್ಲಾದ್ಯಂತ ಕರೆಂಟ್ ಕಟ್ ಆಗಿದೆ.

ನಗರದ ಹಾರೋಹಳ್ಳಿ ಸಮೀಪ ಇರುವ ಕೆಪಿಟಿಸಿಎಲ್‍ನ 220 ಕೆವಿ ಸ್ಟೇಷನ್‍ನಲ್ಲಿ ಈ ದುರಂತ ಸಂಭವಿಸಿದ್ದು, 66 ಕೆವಿ ಬುಷ್ಷಿಂಗ್ ಪ್ಲಾಷ್‍ನಿಂದಾಗಿ ಆಕಸ್ಮಿಕವಾಗಿ ಬೆಂಕಿ ಹರಡಿ ಹೊತ್ತಿಕೊಂಡಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

ಅಕಾರಿಗಳು ಹೇಳುವಂತೆ ಈ ಟ್ರಾನ್ಸ್‍ಫಾರ್ಮರ್‍ನಲ್ಲಿ 39 ಸಾವಿರ ಲೀಟರ್ ಟ್ರೈಸೀಲ್ ಆಯಿಲ್ ತುಂಬಿರುವುದರಿಂದ ಬೆಂಕಿ ನಂದಿಸಲು ಕಷ್ಟವಾಗಿದ್ದು, ದಟ್ಟಹೊಗೆ ಆಕಾಶದೆತ್ತರಕ್ಕೆ ಆವರಿಸುವ ಮೂಲಕ ಕೆಲಕಾಲ ನಗರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ನೂರಾರು ಜನ ಕೆಪಿಟಿಸಿಎಲ್ ಸ್ಟೇಷನ್‍ನತ್ತ ಧಾವಿಸಿದ್ದು, ದಟ್ಟಹೊಗೆಯ ತೀವ್ರತೆ ಕಂಡ ಅಕ್ಕಪಕ್ಕದ ನಿವಾಸಿಗಳು ತಮ್ಮ ಮನೆಗಳಿಗೂ ವ್ಯಾಪಿಸುವುದೇ ಎಂಬ ಆತಂಕ ಹೊರಹಾಕಿದರಾದರೂ, ಇದು ಟ್ರಾನ್ಸ್‍ಫಾರ್ಮರ್‍ನಲ್ಲಿನ ಆಯಿಲ್‍ಗೆ ಹೊತ್ತಿಕೊಂಡಿರುವ ಬೆಂಕಿಯಾಗಿದ್ದು, ಅಕ್ಕಪಕ್ಕ ವ್ಯಾಪಿಸದು ಎಂದು ಅಕಾರಿಗಳು ಸ್ಪಷ್ಟಪಡಿಸಿದರು.

ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಆಯಿಲ್‍ನ ಕಾರಣವಾಗಿ ದಟ್ಟಹೊಗೆ ಮುಗಿಲೆತ್ತರಕ್ಕೆ ಹರಡುತ್ತಿದ್ದಂತೆ 4 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿದ್ದು, ಸುಮಾರು 4 ಗಂಟೆಗಳ ಕಾಲ ಸತತ ಪ್ರಯತ್ನದಿಂದ ಅಗ್ನಿಯನ್ನು ಆರಿಸಲಾಗಿದ್ದು, ಹೊಗೆ ಆವರಿಸಿತ್ತು.

ಟ್ರಾನ್ಸ್‍ಫರ್ಮರ್‍ಅನ್ನು ಪ್ರತಿ 3 ತಿಂಗಳಿಗೊಮ್ಮೆ ಸರ್ವೀಸ್ ಮಾಡಬೇಕಾಗಿದ್ದು, ಇತ್ತೀಚೆಗೆ ಕೋವಿಡ್‍ನಿಂದ ಆಸ್ಪತ್ರೆಗಳಿಗೆ ಸತತ 24 ಗಂಟೆ ಕರೆಂಟ್ ಒದಗಿಸಬೇಕಾದ ಅನಿವಾರ್ಯ ಪರಿಸ್ಥಿತಿಯಿಂದಾಗಿ ಒಂದೂವರೆ ವರ್ಷದಿಂದ ಸರ್ವೀಸ್ ಮಾಡಿರಲಿಲ್ಲ ಎಂದು ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರ ಶ್ರೀನಾಥ್ ತಿಳಿಸಿದರು.

ಕೋಲಾರ ಜಿಲ್ಲೆ ಪೂರ್ತಿ ಕಗ್ಗತ್ತಲಲ್ಲಿ:
ಕೆಪಿಟಿಸಿಎಲ್‍ನ 220 ಕೆವಿ ಸ್ಟೇಷನ್‍ನ 100 ಎಂ.ವಿ.ಎ ಪವರ್ ಟ್ರಾನ್ಸ್‍ಫಾರ್ಮರ್ ಸುಟ್ಟುಹೋಗಿರುವ ಕಾರಣ ಬೇರೆ ಕಡೆಗಳಿಂದ ವಿದ್ಯುತ್ ಸರಬರಾಜಿಗೆ ಕ್ರಮವಹಿಸಲು ಮಧ್ಯರಾತ್ರಿವರೆಗೂ ಸಿಬ್ಬಂದಿ ಕೆಲಸ ಮಾಡಬೇಕಾಗಿದೆ ಎಂದು ಇಇ ತಿಳಿಸಿದರು.

ಇಡೀ ಜಿಲ್ಲೆಯಲ್ಲಿ ಮಧ್ಯರಾತ್ರಿವೇಳೆಗೆ ಕರೆಂಟ್ ಬರುವ ಸಾಧ್ಯತೆ ಇದ್ದು, ಅಕಾರಿಗಳು, ಸಿಬ್ಬಂದಿ ಕೆಲಸ ಮಾಡುತ್ತಿದ್ದೇವೆ, ಜನತೆಯ ಸಹಕಾರವೂ ಬೇಕು ಎಂದರು.

ಲಭ್ಯ ಮೂಲಗಳಿಂದ ಮಧ್ಯರಾತ್ರಿವೇಳೆಗೆ ಕರೆಂಟ್ ಒದಗಿಸಲು ಇಲಾಖೆ ಇಂಜಿನಿಯರ್‍ಗಳು, ಸಿಬ್ಬಂದಿ ಹರಸಾಹಸ ಪಡುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿಯ ಸಕಾಲಕ ಕ್ರಮದಿಂದಾಗಿ ಪಕ್ಕದಲ್ಲೇ ಇದ್ದ ಮತ್ತೊಂದು ಟ್ರಾನ್ಸ್‍ಫಾರ್ಮರ್ ಉಳಿದುಕೊಂಡಿದೆ.

ಸ್ಥಳಕ್ಕೆ ಕೆಪಿಟಿಸಿಎಲ್‍ನ ಹಿರಿಯ ಅಕಾರಿಗಳು ದೌಡಾಯಿಸಿದ್ದು, ಅಗ್ನಿಅನಾಹುತಕ್ಕೆ ಕಾರಣಗಳನ್ನು ಪತ್ತೆಹಚ್ಚುವುದರ ಜತೆಗೆ ಜಿಲ್ಲೆಗೆ ಕರೆಂಟ್ ಶೀಘ್ರ ಒದಗಿಸುವ ಕಾರ್ಯಕ್ಕೆ ಶ್ರಮಿಸುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ