ಮಿಸ್-ಸಿ ಸೋಂಕಿಗೆ ಬಲಿಯಾದ ರಾಜ್ಯದ ಮೊದಲ ಪ್ರಕರಣ

ದಾವಣಗೆರೆ: ಮಿಸ್-ಸಿ ಸೋಂಕು ತಗುಲಿದ್ದ ತುಮಕೂರು ಜಿಲ್ಲೆಯ ಮೂಲದ 5 ವರ್ಷದ ಬಾಲಕಿ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಇದರೊಂದಿಗೆ ಮಿಸ್-ಸಿ ಸೋಂಕಿಗೆ ಬಲಿಯಾದ ರಾಜ್ಯದ ಮೊದಲ ಪ್ರಕರಣ ಇದಾಗಿದೆ.

ತುಮಕೂರು ಜಿಲ್ಲೆ ಶಿರಾದಿಂದ ಹಿರಿಯೂರು ತಾಲೂಕು ಆಸ್ಪತ್ರೆಗೆ, ಅಲ್ಲಿಂದ ಚಿತ್ರದುರ್ಗದ ಶ್ರೀ ಬಸವೇಶ್ವರ ಆಸ್ಪತ್ರೆಗೆ ಶಿರಾ ಮೂಲದ 5 ವರ್ಷದ ಬಾಲಕಿಯನ್ನು ದಾಖಲಿಸಲಾಗಿತ್ತು. ಮಿಸ್-ಸಿ ರೋಗಕ್ಕೆ ತುತ್ತಾಗಿದ್ದ ಬಾಲಕಿಗೆ ಇಲ್ಲಿನ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕಿನಿಂದಾಗಿ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿದ್ದ ಮಗುವಿನ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿತ್ತು.

ವೈದ್ಯರು ಮಗುವನ್ನು ಉಳಿಸಿಕೊಳ್ಳಲು ಸಾಕಷ್ಟು ಹರಸಾಹಸ ಪಟ್ಟರೂ ಶನಿವಾರ ಬೆಳಗಿನ ಜಾವ 3 ಗಂಟೆ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೇ ಮಗು ಮೃತಪಟ್ಟಿದೆ.

ಜಿಲ್ಲೆಯಲ್ಲಿ ಈವರೆಗೆ 10 ಮಿಸ್-ಸಿ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಶಿರಾ ಮೂಲದ ಬಾಲಕಿ ಸೋಂಕಿಗೆ ಬಲಿಯಾಗಿದ್ದು, ಎರಡು ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಇಂತಹ ಪ್ರಕರಣಗಳ ನಿಯಂತ್ರಣ ಮತ್ತು ಸೂಕ್ತ ಚಿಕಿತ್ಸೆ ಸಂಬಂಧ ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಮಕ್ಕಳಲ್ಲಿ ಈ ತರಹದ ಯಾವುದೇ ಲಕ್ಷಣ ಕಂಡು ಬಂದಲ್ಲಿ ಪೋಷಕರು ಕೂಡಲೇ ತಜ್ಞ ಮಕ್ಕಳ ವೈದ್ಯರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಕಾರಿ ಮಹಾಂತೇಶ ಜಿ.ಬೀಳಗಿ ಮನವಿ ಮಾಡಿದ್ದಾರೆ.

ಇನ್ನೊಂದೆಡೆ, ದೇಶದಲ್ಲೇ ಅಪರೂಪದ್ದೆನ್ನಲಾದ ಎ-ನೆಕ್ ಸೋಂಕು ಪೀಡಿತ ಬಾಲಕ ಸೂಕ್ತ ಚಿಕಿತ್ಸೆಯಿಂದಾಗಿ ಸೋಂಕಿನಿಂದ ಸಾಕಷ್ಟು ಸುಧಾರಣೆ ಕಾಣುತ್ತಿರುವುದು ವೈದ್ಯರು, ಸಿಬ್ಬಂದಿಗಳಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ವಿಜಯ ನಗರ ಜಿಲ್ಲೆ ಹೂವಿನ ಹಡಗಲಿ ಮೂಲದ 13 ವರ್ಷದ ಬಾಲಕ ಕೊರೋನಾ ಪೀಡತನಾಗಿದ್ದು, ನಂತರ ಎ-ನೆಕ್ ಸೋಂಕಿಗೆ ತುತ್ತಾಗಿದ್ದ. ಬಾಲಕನನ್ನು ದಾವಣಗೆರೆ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿತ್ತು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ, ಮಕ್ಕಳ ತಜ್ಞ ಡಾ.ಎನ್.ಕೆ. ಕಾಳಪ್ಪನವರ್ ಮತ್ತು ತಂಡದ ನಿರಂತರ ಆರೈಕೆಯಿಂದಾಗಿ ಎ-ನೆಕ್ ಸೋಂಕಿಗೆ ತುತ್ತಾಗಿದ್ದ ಬಾಲಕನಲ್ಲಿ ಚೇತರಿಕೆ ಕಂಡು ಬರುತ್ತಿದೆ. ಕಳೆದ 15 ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕನನ್ನು ಶನಿವಾರ ಜನರಲ್ ವಾರ್ಡ್‍ಗೆ ವರ್ಗಾಯಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ