ಹುಬ್ಬಳ್ಳಿ: ರಾಮ ಮಂದಿರ ನಿರ್ಮಾಣಕ್ಕೆ ದೇಶದ ತುಂಬಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯ ಉದ್ದಿಮೆದಾರರು, ನಿರ್ಮಾತೃಗಳು ಹಾಗೂ ವ್ಯಾಪಾರಸ್ಥರಿಂದ
ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿ,
ಮಂದಿರ ನಿರ್ಮಾಣ 130 ಕೋಟಿ ಜನರ ಆಶಯ. ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದ ತಕ್ಷಣ ದೇಶದ ಹಲವು ಶ್ರೀಮಂತ ವ್ಯಕ್ತಿಗಳು ಮಂದಿರ ನಿರ್ಮಾಣ ವೆಚ್ಚವನ್ನು ಸ್ವಂತವಾಗಿ ಭರಿಸುವ ಬಗ್ಗೆ ಪ್ರಸ್ತಾವ ಮುಂದಿಟ್ಟರು. ಆದರೆ, ರಾಮ ಮಂದಿರದ ಜೊತೆ ದೇಶದ ಪ್ರತಿ ಜನರನ್ನು ಬೆಸೆಯುವ ದೃಷ್ಟಿಯಿಂದ, ಜನರಿಂದ ಕಾಣಿಕೆ ಸಂಗ್ರಹಿಸಲಾಗುತ್ತದೆ ಎಂದರು.
ಮೋದಿ ಆಡಳಿತದಲ್ಲಿ ಕನಸುನನಸು:
ಬಿಜೆಪಿ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣದ ಆಶ್ವಾಸನೆ ನೀಡಿದಾಗ ಹಲವು ಜನರು ಇದರ ಬಗ್ಗೆ ಅಪನಂಬಿಕೆ ಹೊಂದಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಕಾರಕ್ಕೆ ಬಂದ ಮೇಲೆ ರಾಮ ಮಂದಿರ ವ್ಯಾಜ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದಿನಂಪ್ರತಿ ವಿಚಾರಣೆ ನಡೆದು ಬೇಗನೆ ತೀರ್ಪು ಬರುವಂತಾಯಿತು. ನ್ಯಾಯಾಲಯ ನೀಡಿದ ತೀರ್ಪನ್ನು ಎಲ್ಲಾ ಧರ್ಮದ ಜನರು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ ಎಂದರು.