ಲಖನೌ: ಕೊರೋನಾ ನಿರೋಧಕ ಲಸಿಕೆಗಳ ಬಗ್ಗೆ ಕೆಲವರು ಭೀತಿ ವ್ಯಕ್ತಪಡಿಸುತ್ತಿರುವ ಹಿನ್ನೆಲೆ, ಆರೋಗ್ಯ ಕಾರ್ಯಕರ್ತರೊಂದಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಸಂವಹನ ನಡೆಸಿ ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮದ ಬಗೆಗಿದ್ದ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಮುಂದಾಗಿದ್ದಾರೆ.
ಶುಕ್ರವಾರ ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿನ ಆರೋಗ್ಯ ಕಾರ್ಯಕರ್ತರೊಂದಿಗೆ ವಿಡಿಯೋ ಕಾನರೆನ್ಸ್ ಮೂಲಕ 30 ನಿಮಿಷಗಳ ಸಂವಹನ ನಡೆಸಿದ ಮೋದಿ, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಲಸಿಕೆಗೆ ನೀಡಿರುವ ಅನುಮೋದನೆಯೇ ಅದರ ಪರಿಣಾಮದ ಬಗ್ಗೆ ಜನರಲ್ಲಿ ಬಲವಾದ ಸಂದೇಶವನ್ನು ರವಾನಿಸಿದೆ ಎಂದಿದ್ದಾರೆ.
ಕೊರೋನಾ ವಾರಿಯರ್ಗಳು ನಿಜಕ್ಕೂ ಅದ್ಭುತ ಕಾರ್ಯ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದ ಪ್ರಧಾನಿ, ದೇಶದ ಲಸಿಕಾ ಅಭಿಯಾನದ ಮೊದಲ ಹಂತದಲ್ಲಿ ಲಸಿಕೆಯನ್ನು ಪಡೆಯುವ ಮೂಲಕ ಆರೋಗ್ಯ ಕಾರ್ಯಕರ್ತರು ಜನರಲ್ಲಿ ವಿಶ್ವಾಸವನ್ನು ಮೂಡಿಸಿದ್ದಾರೆ. ಅಲ್ಲದೆ, ಸಾಂಕ್ರಾಮಿಕದ ವಿರುದ್ಧ ನಿರ್ಭಯವಾಗಿ ಕಾರ್ಯನಿರ್ವಹಿಸಲು ಸಹ ಲಸಿಕೆ ಪಡೆಯುವುದು ಅವರಿಗೆ ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.
ಲಸಿಕೆ ಕುರಿತು ಆರೋಗ್ಯ ಕಾರ್ಯಕರ್ತರ ಮೊದಲ ಅನುಭವನ್ನು ಹಾಗೂ ಅಭಿಪ್ರಾಯವನ್ನು ಹಂಚಿಕೊಳ್ಳಲು ಈ ಸಂವಹನವು ಅವಕಾಶ ನೀಡಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಕೊರೋನಾ ನಿರೋಧಕ ಲಸಿಕೆಯನ್ನು ಸ್ವೀಕರಿಸಿರುವ ಹಾಗೂ ಇತರರಿಗೆ ಲಸಿಕೆ ನೀಡಿರುವ ಆರೋಗ್ಯ ಕಾರ್ಯಕರ್ತರು, ಸಂವಹನದಲ್ಲಿ ಮೋದಿ ಅವರೊಂದಿಗೆ ಲಸಿಕೆ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆಸ್ಪತ್ರೆಯೊಂದರ ಮೇಟ್ರನ್, ದಾದಿ, ಲ್ಯಾಬ್ ಟೆಕ್ನಿಷಿಯನ್ ಮತ್ತು ವೈದ್ಯರೊಬ್ಬರು ಲಸಿಕೆ ಪಡೆದ ಬಳಿಕ ಯಾವುದೇ ಬಗೆಯ ಅಡ್ಡ ಪರಿಣಾಮಗಳು ಉಂಟಾಗಿಲ್ಲ ಎಂದು ತಿಳಿಸಿದ್ದಾರೆ.