ಭುವನೇಶ್ವರ: ಅಮೇಜಾನ್ ಸಂಸ್ಥೆ ತನ್ನ ವೆಬ್ಸೈಟ್ನಲ್ಲಿ ಅತ್ಯಂತ ಕಡಿಮೆ ದರದಲ್ಲಿ ವಸ್ತುಗಳನ್ನು ಮಾರಾಟ ಪಟ್ಟಿಯಲ್ಲಿ ಹಾಕಿಕೊಳ್ಳುವುದು ವೈಬ್ಸೈಟ್ ನೋಡುವ ಬಹುಮಂದಿಗೆ ಗೊತ್ತು. ಹಾಗೆ ಕಡಿಮೆ ದರ ನಮೂದಿಸಿ, ಈಗ 45 ಸಾವಿರ ರೂ.ಗಳನ್ನು ದಂಡ ತೆರಬೇಕಾಗಿರುವ ಸ್ಥಿತಿ ಅಮೇಜಾನ್ ಪಾಲಿಗೆ ಬಂದಿದೆ.
ಒಡಿಶಾದ ಕಾನೂನು ವಿದ್ಯಾರ್ಥಿ ಸುಪ್ರಿಯೊ ರಂಜನ್ ಮಹಾಪಾತ್ರರಿಗೆ 2014ರಲ್ಲಿ ಲ್ಯಾಪ್ಟಾಪ್ ಅಗತ್ಯವಿತ್ತು. ಅಮೇಜಾನ್ ವೈಬ್ಸೈಟ್ನಲ್ಲಿ 190 ರೂ.ಗೆ ಹೊಸ ಲ್ಯಾಪ್ಟಾಪ್ ದೊರೆಯಲಿದೆ ಎಂಬ ಮಾಹಿತಿ ಅನುಸರಿಸಿ ಕೋರಿಕೆ ಸಲ್ಲಿಸಿದರು. ಒಪ್ಪಿಗೆ ನೀಡಿದ ಸಂಸ್ಥೆ ಕೆಲ ಗಂಟೆಗಳ ನಂತರ ಈ ಕ್ರಮವನ್ನು ರದ್ದುಪಡಿಸಿತು.
ಸುಮ್ಮನೇ ಕುಳಿತುಕೊಳ್ಳದ ಮಹಾಪಾತ್ರ, ತಮಗೆ ಮೊದಲು ತಿಳಿಸಿದ ಬೆಲೆಗೆ ಲ್ಯಾಪ್ಟಾಪ್ ಒದಗಿಸದ ಸಂಸ್ಥೆ ಬಗ್ಗೆ ಒಡಿಶಾ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದರು. ಈಗ ಆಯೋಗವು ಮಹಾಪಾತ್ರರಿಗೆ ಉಂಟಾಗಿರುವ ಮಾನಸಿಕ ಸಂಕಟ ಮತ್ತು ಕಿರುಕುಳದ ಪರಿಹಾರವಾಗಿ 40 ಸಾವಿರ ರೂ ಮತ್ತು ಖರೀದಿದಾರರಿಗೆ ದಾವೆ ವೆಚ್ಚ 5 ಸಾವಿರ ರೂ. ಪರಿಹಾರ ನೀಡಬೇಕೆಂದು ಅಮೇಜಾನ್ ಸಂಸ್ಥೆಗೆ ಆದೇಶ ನೀಡಿದೆ.