
ಕೋಲ್ಕತ್ತ: ಪಶ್ಚಿಮ ಬಂಗಾಳದ ಡೈಮಂಡ್ ಬಂದರಿನಲ್ಲಿ ಗುರುವಾರ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟಕ್ಕೆ ಕೈಲಾಶ್ ವಿಜಯವರ್ಗೀಯ ಸೇರಿದಂತೆ ಬಿಜೆಪಿಯ ಹಲವು ನಾಯಕರು ಗಾಯಗೊಂಡಿದ್ದಾರೆ. ಅಲ್ಲದೆ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲ ಮೇಲೂ ದಾಳಿ ನಡೆಸಲಾಗಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇಂದು ದಾಳಿಯಲ್ಲಿ ಬಿಜೆಪಿ ನಾಯಕರಾದ ಮುಕುಲ್ ರಾಯ್ ಮತ್ತು ಕೈಲಾಶ್ ವಿಜಯವರ್ಗೀಯ ಅವರು ಗಾಯಗೊಂಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡು ಎಂದು ಜೆ.ಪಿ. ನಡ್ಡಾ ತಿಳಿಸಿದ್ದಾರೆ.
ನಮ್ಮ ಬೆಂಗಾವಲಿನಲ್ಲಿದ್ದ ಕಾರು ದಾಳಿಗೊಳಗಾಗಿಲ್ಲ. ನಾನು ಪ್ರಯಾಣಿಸುತ್ತಿದ್ದ ಕಾರು ಬುಲೆಟ್ಪ್ರೂಫ್ ಆಗಿದ್ದರಿಂದ ನಾನು ಸುರಕ್ಷಿತವಾಗಿದ್ದೇನೆ. ಪಶ್ಚಿಮ ಬಂಗಾಳದಲ್ಲಿನ ಕಾನೂನುಬಾಹಿರತೆ ಮತ್ತು ಅಸಹಿಷ್ಣುತೆಯು ಕೊನೆಗೊಳ್ಳಬೇಕಿದೆ ಎಂದು ದಕ್ಷಿಣ 24 ಪರಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಡ್ಡಾ ಹೇಳಿದ್ದಾರೆ.
ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗೀಯ ಅವರು ದಕ್ಷಿಣ 24 ಪರಗಣದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರು ಡೈಮಂಡ್ ಬಂದರಿನಲ್ಲಿ ಅವರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದರು. ಇದೇ ವೇಳೆ ನಡ್ಡಾ ಅವರ ಬೆಂಗಾವಲು ಹಾದು ಹೋಗುತ್ತಿದ್ದ ಮಾರ್ಗವನ್ನು ನಿರ್ಬಂಸಲು ಕೂಡ ಪ್ರತಿಭಟನಾಕಾರರು ಯತ್ನಿಸಿದರು.