ವಿಧಾನಪರಿಷತ್ತು: ರೈತರಿಗೆ ಅನುಕೂಲವಾಗವ ನಿಟ್ಟಿನಲ್ಲಿ ಎರಡು ಪ್ರಮುಖ ನಿಯಮವನ್ನು ಸಡಿಲಗೊಳಿಸುವ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ, ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರುತ್ತಿದೆ. ಇದರಿಂದ ರೈತರಿಗೆ ನಮ್ಮ ಬೆಳೆ ನಮ್ಮ ಹಕ್ಕು ಎಂಬ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪರಿಷತ್ ಕಲಾಪದಲ್ಲಿ ಸ್ಪಷ್ಟಪಡಿಸಿದರು.
ಭೋಜನ ವಿರಾಮದ ಬಳಿಕ ಆರಂಭವಾದ ವಿಧಾನಪರಿಷತ್ ಕಲಾಪದ ಆರಂಭದಲ್ಲೇ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿಯಲ್ಲಿ ತೊಡಗಿದ್ದು ಈ ವೇಳೆ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಬಿಜೆಪಿ ಅವರಿಗೆ ವಿಧೇಯಕ ಅಂಗೀಕಾರ ಮಾಡಬೇಕೆಂಬ ಮನಸಿಲ್ಲ. ಬೆಳಗಿನಿಂದ ಛತ್ರದ ಎತ್ತರಕ್ಕೆ ಜಿಗಿದಾಡುತ್ತ ಸಮಯ ಹಾಳು ಮಾಡಿದ್ದಾರೆ. ಸರ್ಕಾರಕ್ಕೆ ಸಲಹೆ ಸೂಚನೆಯನ್ನು ಕೊಡಬೇಕು ಎಂದು ನಾವು ಬಂದಿದ್ದೇವೆ. ವಿಧೇಯಕ ಬಗ್ಗೆ ಚರ್ಚೆ ಮಾಡುವುದಾದರೆ ನಮ್ಮ ಸದಸ್ಯರನ್ನು ವಾಪಾಸ್ಸು ಬರುವಂತೆ ಹೇಳುತ್ತೇನೆ ಎಂದಾಗ ಸಚಿವ ಎಸ್.ಟಿ.ಸೋಮಶೇಖರ್ ಮಂಡನೆ ತಯಾರಾಗಿರುವುದಾಗಿ ಹೇಳಿದರು. ಬಳಿಕ ಎಸ್.ಆರ್.ಪಾಟೀಲ್ ಸದಸ್ಯರನ್ನು ವಾಪಾಸು ಸ್ಥಳಕ್ಕೆ ಬರುವಂತೆ ಮನವಿ ಮಾಡಿದರು.
ತಿದ್ದುಪಡಿ ವಿದೇಯಕ ಮಂಡನೆಗೆ ಅವಕಾಶ:
ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತ ರೂಪದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ತಿದ್ದುಪಡಿ ವಿಧೇಯಕ ಮಂಡನೆಗೆ ಅವಕಾಶ ಮಾಡಿಕೊಟ್ಟರು.
ವಿಧೇಯಕ ಮಂಡಿಸಿ ಮಾತನಾಡಿದ ಎಸ್.ಟಿ.ಸೋಮಶೇಖರ್, ರೈತರು ಬೆಳೆದ ಬೆಳೆಗಳನ್ನು ಎಪಿಎಂಸಿ ವ್ಯಾಪ್ತಿಯಲ್ಲೇ ಮಾರಾಟ ಮಾಡಬೇಕು ಎಂಬ ನಿಯಮವಿತ್ತು. ಅದನ್ನು ಸಡಿಲಗೊಳಿಸಿ ರೈತ ಎಲ್ಲಿ ಬೇಕಾದರೂ ವ್ಯಾಪಾರವನ್ನು ಮಾಡಬಹುದು ಎಂಬ ತಿದ್ದುಪಡಿ ಮಾಡಲಾಗಿದೆ. ಅಲ್ಲದೇ ಬೇರೆ ಕಡೆ ವ್ಯಾಪಾರ ಮಾಡಿದರೆ 2000 ದಿಂದ 5ಸಾವಿರದ ವರೆಗೆ ದಂಡ ವಿಸಲಾಗುತ್ತಿತ್ತು. ಆದರೆ ಈ ದಂಡವನ್ನು ತೆಗೆದು ಪಾನ್ ಕಾರ್ಡ್ ಇದ್ದರೆ ಎಪಿಎಂಸಿ ಹೊರಗಡೆಯೂ ವ್ಯಾಪಾರ ಮಾಡುವಂತೆ ಮಾಡಲಾಗಿದೆ.ಇದರಿಂದ ರೈತ ನನ್ನ ಬೆಳೆ ನನ್ನ ಹಕ್ಕು ಎಂಬಂತೆ ಎಲ್ಲಿ ಬೇಕಾದರೂ ವ್ಯಾಪಾರ ಮಾಡಬಹುದಾಗಿದೆ.
27 ಜಿಲ್ಲೆಗಳಲ್ಲಿ ಸಂಚರಿಸಿ ನಿರ್ಧಾರ:
ರಾಜ್ಯದ 27 ಜಿಲ್ಲೆಗಳಲ್ಲಿ ಓಡಾಡಿ ಎಪಿಎಂಸಿಗಳೊಂದಿಗೆ ಚರ್ಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಈ ವರೆಗೆ ರೈತರಿಂದ 25 ಕೋಟಿಯಷ್ಟು ಹಣವನ್ನು ದಂಡದ ಮುಖಾಂತರ ವಸೂಲು ಮಾಡಲಾಗಿದೆ. ಇನ್ನುಮುಂದೆ ಕೇಸ್ ಹಾಕುವುದು ದಂಡ ವಿಸುವುದು,ದಲ್ಲಾಳಿಗಳ ತೊಂದರೆ ತಪ್ಪಲಿದೆ. ವಿಧೇಯಕವನ್ನು ಅಂಗೀಕಾರ ಮಾಡಿಕೊಡುವಂತೆ ಮನವಿ ಮಾಡಿದರು.
ಕೇವಲ ಶೇ.30 ಮಾತ್ರಬೆಳೆ ಮಾರಾಟ:
ಜೆಡಿಎಸ್ನ ಮರಿತಿಬ್ಬೇಗೌಡ ಮಾತನಾಡಿ, ಎಪಿಎಂಸಿ ರೈತರ ಪ್ರಮುಖ ಜೀವನಾಡಿ. ಎಪಿಎಂಸಿ ಇದ್ದರೂ ಶೇ.30ರಷ್ಟು ಮಾತ್ರ ಬೆಳೆಗಳು ಮಾರಾಟವಾಗುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಇದುವರೆಗೆ ಬೆಂಬಲ ಬೆಲೆ ಕೊಡಲು ಸಾಧ್ಯವಾಗಿಲ್ಲ. ಕೇರಳ, ತಮಿಳುನಾಡಿನಲ್ಲಿ ಭತ್ತ ಖರೀದಿ ನಡೆಯುತ್ತಿದೆ. ಆದರೆ ನಮ್ಮಲ್ಲಿ ಇನ್ನೂ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಬೆಳೆಗಳ ಶೇಖರಣೆಗೆ ಜಾಗವಿಲ್ಲದೆ ರೈತರಿಗೆ ತೊಂದರೆಯಾಗುತ್ತಿದ್ದು ಕೋಲ್ಡ್ ಸ್ಟೋರೇಜ್ಗಳನ್ನು ತೆರೆದಿಲ್ಲ.
ಇದು ಬಹುರಾಷ್ಟ್ರೀಯ ಕಂಪನಿಗಳಿಗೆ ರೆಡ್ ಕಾರ್ಪೆಟ್ ಹಾಕಿದಂತೆ. ಇದರಿಂದ ರೈತರಿಗೆ ಬೆಳೆ ಬೆಲೆ ಬಿದ್ದು ಹೋದಾಗ ಬೆಂಬಲ ಬೆಲೆ ಸಿಗದೇ ಇರುವುದು, ತೂಕದಲ್ಲಿ ಮೋಸ ಸೇರಿದಂತೆ ಇನ್ನಿತರ ತೊಂದರೆಗಳು ಎದುರಾಗಲಿವೆ. ಮಾರ್ಟ್ನಂತಹ ಮಳಿಗೆಗಳು ಬಂದು ಪೆಟ್ಟಿ ಅಂಗಡಿಗಳು ಮುಚ್ಚಿ ಹೋಗುತ್ತಿದೆ. ಅದರಂತೆ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟರೆ ದೊಡ್ಡ ಮೀನು ಸಣ್ಣ ಮೀನನ್ನು ನುಂಗಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ದಲ್ಲಾಳಿಗಳಿಲ್ಲದ ವ್ಯಾಪಾರ ಯಾವುದಿದೇ ಹೇಳಿ:
ಮಧ್ಯಪ್ರವೇಶಿಸಿ ಎಚ್.ವಿಶ್ವನಾಥ್ ಎಪಿಎಂಸಿ ದಲ್ಲಾಳಿಗಳ ಬಗ್ಗೆ ಹೇಳಿ ಎಂದಾಗ ಮುಂದುವರೆದ ಮರಿತಿಬ್ಬೇ ಗೌಡರು ರಾಜ್ಯದ ಯಾವ ಉತ್ಪನ್ನಗಳ ಮಾರಾಟದಲ್ಲಿ ದಲ್ಲಾಳಿಗಳಿಲ್ಲ ಎಂಬುದಕ್ಕೆ ಉತ್ತರ ಕೊಡಿ. ಶೇ 80 ರಷ್ಟು ಎಲ್ಲಾ ವಲಯದ ಉತ್ಪನ್ನಗಳು ದಲ್ಲಾಳಿಗಳ ಮೂಲಕವೇ ಮಾರಾಟವಾಗುತ್ತಿವೆ ಎಂದಾಗ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಎದ್ದು ನಿಂತು ನಾನು ರೈತ. ನಮ್ಮ ಬೆಳೆಗಳನ್ನು ಜಮಖಂಡಿ,ಅಥಣಿ,ಮಾಲೀಪುರ,ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋದಾಗ ಅಲ್ಲಿ ದಲ್ಲಾಳಿಗಳ ಮುಂದೆ ಕೈಮುಗಿದು ನಿಲ್ಲುವ ಪ್ರಸಂಗವನ್ನು ವಿವರಿಸಿದರು.
ಕಾಂಗ್ರೆಸ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಪಿ.ಆರ್.ರಮೇಶ್,ಪ್ರಕಾಶ್ ರಾಥೋಡ್, ಬಸವರಾಜ ಇಟಗಿ ಹಾಗೂ ಜೆಡಿಎಸ್ನ ಭೋಜೇ ಗೌಡ,ತಿಪ್ಪೇಸ್ವಾಮಿ ವಿಧೇಯಕದ ಕುರಿತು ಸುೀರ್ಘ ವಿಷಯ ಮಂಡನೆ ಮಾಡಿದ್ದು ವಿಧೇಯಕದಿಂದ ಬಹುರಾಷ್ಟ್ರೀಯ ಕಂಪನಿಗಳಿಗೆ ಲಾಭವಾಗಲಿದೆ. ವಿಧೇಯಕವನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು.