ಜಾನುವಾರು ವಧೆ, ಪ್ರತಿಬಂಧಕ -ಸಂರಕ್ಷಣಾ ವಿಧೇಯಕಕ್ಕೆ ವಿಧಾನಸಭೆ ಅಸ್ತು ಗೋಹತ್ಯೆ ನಿಷೇಧ?ಜಾನುವಾರು ವಧೆ, ಪ್ರತಿಬಂಧಕ -ಸಂರಕ್ಷಣಾ ವಿಧೇಯಕಕ್ಕೆ ವಿಧಾನಸಭೆ ಅಸ್ತು ಗೋಹತ್ಯೆ ನಿಷೇಧ?

ವಿಧಾನಸಭೆ: ನಾಡಿನ ಜನರಿಗೆ ಕೊಟ್ಟ ಮಾತಿನಂತೆ ಬುಧವಾರ ಕರ್ನಾಟಕ ವಿಧಾನಸಭೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರವು ಕರ್ನಾಟಕ ಜಾನುವಾರು ವಧೆ, ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020ಕ್ಕೆ ಅನುಮೋದನೆ ಪಡೆದುಕೊಂಡಿತು.
ಈ ಮೂಲಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಮುಂದಾಗಿರುವ ದೇಶದ ಮೂರನೇ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಕರ್ನಾಟಕವು, ಗುಜರಾತ್ ಮತ್ತು ಉತ್ತರ ಪ್ರದೇಶದ ಕಾಯ್ದೆಯನ್ನು ಮಾದರಿಯನ್ನಾಗಿಟ್ಟುಕೊಂಡಿದೆ.
ಈ ವಿಧೇಯಕವಿನ್ನು ವಿಧಾನಪರಿಷತ್ತಿನಲ್ಲಿ ಅನುಮೋದನೆಗೊಳ್ಳಬೇಕಿದ್ದು, ರಾಜ್ಯಪಾಲರ ಅಂಗೀಕಾರ ಪಡೆದುಕೊಳ್ಳಬೇಕಿದೆ. ಬಳಿಕ ನಿಯಮ ರೂಪಿಸಿ, ಕಾಯ್ದೆಯಾಗಿ ಜಾರಿಗೊಳಿಸುವ ಹೊಣೆಯೂ ಸರ್ಕಾರದ ಮೇಲಿದೆ.
ಆಡಳಿತ ಪಕ್ಷದಲ್ಲಿ ಸಂಭ್ರಮ, ಪ್ರತಿಪಕ್ಷ ಪ್ರಚೋದನೆ
ಬುಧವಾರ ವಿಧಾನಸಭೆಯಲ್ಲಿ ಪೂರಕ ಅಂದಾಜು ಮಂಡನೆ ನಂತರ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು ವಿಧೇಯಕ ಮಂಡಿಸಲು ಮುಂದಾದರು. ಅತ್ತ ಆಡಳಿತಾರೂಢ ಬಿಜೆಪಿ ಶಾಸಕರು ಕೇಸರಿ ಶಾಲು ಧರಿಸಿ, ಸಂಭ್ರಮದಿಂದ ವಿಧೇಯಕವನ್ನು ಬೆಂಬಲಿಸಿದರೆ, ಇನ್ನಷ್ಟು ಪ್ರಚೋದನೆಗೊಳಗಾದ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಆಕ್ಷೇಪಿಸಿ ಧರಣಿಗಿಳಿದರು. ಯಾವ ತಿಳಿವಳಿಕೆ ಪತ್ರವನ್ನೂ ನೀಡದೆಯೇ ಏಕಾಏಕಿ ಮಸೂದೆ ಮಂಡಿಸುತ್ತಿರುವುದು ಸರಿಯಲ್ಲ ಎಂದು ಗದ್ದಲ ಆರಂಭಿಸಿದರು. ಜೆಡಿಎಸ್ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಈ ಮಧ್ಯೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಪರ-ವಿರೋಧದ ಘೋಷಣೆಗಳು ಕೇಳಿ ಬಂದವು. ಜೈಶ್ರೀರಾಮ್, ಹಿಂದು ವಿರೋ ಕಾಂಗ್ರೆಸ್ ಎಂಬ ಘೋಷಣೆಗಳನ್ನು ಬಿಜೆಪಿ ಸದಸ್ಯರು ಕೂಗಿದರೆ, ಸದನದ ಪಾವಿತ್ರ್ಯ ಹಾಳು ಮಾಡಲಾಗುತ್ತಿದೆ, ಶಾಸನಸಭೆಯನ್ನು ಬಿಜೆಪಿ ಸಭೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರತಿಪಕ್ಷ ಸದಸ್ಯರು ಉದ್ಘರಿಸಿದರು. ಸಂಧಾನ ಸಭೆಯೂ ವಿಫಲವಾಯಿತು. ಕಲಾಪ ಬಹಿಷ್ಕರಿಸಿ ಹೊರನಡೆದರು. ಕೊನೆಗೆ ವಿಧೇಯಕಕ್ಕೆ ಅಸ್ತು ಎನ್ನಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ