ಹೊಸದಿಲ್ಲಿ: ದೇಶದಲ್ಲಿ ಒಟ್ಟು 9 ಲಸಿಕೆ ಪೈಕಿ 6 ಲಸಿಕೆಗಳು ಬಹುತೇಕ ಅಂತಿಮ ಹಂತದ ವೈದ್ಯಕೀಯ ಪ್ರಯೋಗದಲ್ಲಿ ಇರುವಾಗ, ಭಾರತ ಲಸಿಕೆ ಸಂಗ್ರಹಿಸಲು ಅಗತ್ಯ ಶೈತ್ಯಾಗಾರ ವ್ಯವಸ್ಥೆ ನಿರ್ಮಿಸುವಲ್ಲಿ ಕಾರ್ಯನಿರತವಾಗಿದೆ.
ಸೋಂಕಿಗೆ ಆದಷ್ಟು ಶೀಘ್ರವೇ ಲಭ್ಯವಾಗಲಿರುವ ಮೊದಲ ಸುತ್ತಿನ ಲಸಿಕೆ ಸಂಗ್ರಹಿಸಲು ದೇಶಾದ್ಯಂತ 29, 947 ಶೀತಲೀಕರಣ ಘಟಕಗಳನ್ನು ಸರ್ಕಾರ ನಿರ್ಮಿಸುತ್ತಿರುವುದಾಗಿ ತಿಳಿದುಬಂದಿದೆ.
ಲಸಿಕೆ ವಿತರಣೆಗೆಂದು ಹೆಚ್ಚುವರಿ ಆರೋಗ್ಯ ಸಿಬ್ಬಂದಿಯನ್ನು ನೇಮಿಸಲಾಗುತ್ತಿದ್ದು, ಲಸಿಕೆ ವಿತರಣೆ ಬಗ್ಗೆ ನಿಗಾವಹಿಸಲು ಕೋ-ವಿನ್ ಎಂಬ ಆ್ಯಪ್ ಅನ್ನು ಕೇಂದ್ರ ಅಭಿವೃದ್ಧಿ ಪಡಿಸಿದೆ. ಅಲ್ಲದೇ ಮೊದಲ ಹಂತದಲ್ಲಿ, ಆರೋಗ್ಯ ಸಿಬ್ಬಂದಿ, ವೃದ್ಧರು ಹಾಗೂ ಗಂಭೀರ ರೋಗ ಲಕ್ಷಣವುಳ್ಳವರಿಗೆ ಲಸಿಕೆ ನೀಡಲು ನಿರ್ಧರಿಸಿರುವ ಸರ್ಕಾರವು ಡಿಸೆಂಬರ್ 10ರಿಂದ ರಾಜ್ಯಗಳಲ್ಲಿ ಹೆಚ್ಚುವರಿಯಾಗಿ ಶೈತ್ಯಾಗಾರ ಸೌಲಭ್ಯ ಒದಗಿಸಲು ಆರಂಭಿಸಲಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಲಸಿಕೆ ದೊರಕಬೇಕಾದ ಪ್ರತಿಯೊಬ್ಬರಿಗೂ ಲಸಿಕೆ ನೀಡುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಲಸಿಕೆ ವಿತರಣೆ ಕಾರ್ಯಕ್ರಮವೂ ಬಹು ದೀರ್ಘಾವ ಕಾರ್ಯಕ್ರಮವಾಗಿದ್ದು, ಒಂದು ವರ್ಷದ ತನಕ ನಡೆಯಬಹುದು. 2.39 ಲಕ್ಷ ನುರಿತ ಆರೋಗ್ಯ ಸಿಬ್ಬಂದಿ ಪೈಕಿ 1.54 ಲಕ್ಷ ಸಿಬ್ಬಂದಿಯನ್ನು ಲಸಿಕೆ ನೀಡಲೆಂದೇ ನಿಯೋಜಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.