ಹೊಸದಿಲ್ಲಿ:ತಾನು ಕೇಂದ್ರ ಕೃಷಿ ಸಚಿವನಾಗಿದ್ದಾಗ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿ (ಎಪಿಎಂಸಿ)ಕಾಯ್ದೆಗೆ ತಿದ್ದುಪಡಿ ತಂದು ಸುಧಾರಣಾ ಕಾಯ್ದೆಯೊಂದನ್ನು ರೂಪಿಸುವಂತೆ ವಿವಿಧ ರಾಜ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರವೊಂದು ಎನ್ಸಿಪಿ ನಾಯಕ ಶರದ್ ಪವಾರ್ ಅವರನ್ನೀಗ ಪೇಚಿಗೆ ಸಿಲುಕಿಸಿದೆ. ಶರದ್ ಪವಾರ್ ಈಗ ಕಾಂಗ್ರೆಸ್ನಂತೆಯೇ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಸುವ ಪಂಜಾಬ್ ರೈತ ಗುಂಪುಗಳನ್ನು ಬೆಂಬಲಿಸುತ್ತಿರುವ ವೇಳೆಯಲ್ಲೇ ಅವರು , ಕೇಂದ್ರ ಕೃಷಿ ಸಚಿವರಾಗಿದ್ದಾಗ ರಾಜ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರವೀಗ ಬಹಿರಂಗಗೊಂಡಿದೆ.ಕಾಂಗ್ರೆಸ್ ಕೂಡಾ ಈ ಹಿಂದೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವಂತೆ ರಾಜ್ಯಗಳಿಗೆ ಸೂಚಿಸಿತ್ತು. ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಈ ಬಗ್ಗೆ ರಾಜ್ಯಗಳಿಗೆ ಸೂಚನೆ ನೀಡಿದ್ದರು.ಹಾಗೆಯೇ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲೂ ಪ್ರಕಟಿಸಿತ್ತು. ಆದರೆ ಈಗ ಕಾಂಗ್ರೆಸ್ಈ ಕಾಯ್ದೆ ತಿದ್ದುಪಡಿಯನ್ನು ವಿರೋಸುವುದಾಗಿ ಹೇಳಿಕೊಳ್ಳುತ್ತಿದೆ.
ಅಂದು ಶರದ್ ಪವಾರ್ ಕೃಷಿ ಸಚಿವರಾಗಿದ್ದಾಗ ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ , ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವಂತೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ, ಎಪಿಎಂಸಿ ಕಾಯ್ದೆಯಲ್ಲಿ ಸುಧಾರಣೆಗಳ ಅಗತ್ಯವಿದೆ. ಈ ಕಾಯ್ದೆ ಮುಂದುವರಿಯಲಿ.ಆದರೆ ಸುಧಾರಣೆಗಳು ಆಗಬೇಕಾಗಿದೆ ಎಂದಿದ್ದರು. ಅಷ್ಟೇ ಅಲ್ಲದೆ, ಕೃಷಿ ಮಾರುಕಟ್ಟೆ ಮೂಲಸೌಕರ್ಯಗಳಲ್ಲಿ ಖಾಸಗಿ ಕ್ಷೇತ್ರದ ಪಾಲುದಾರಿಕೆಗೆ ಅವಕಾಶ ನೀಡುವಂತೆಯೂ ಪವಾರ್ ಪತ್ರದಲ್ಲಿ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದರು.
ಈ ಪತ್ರಗಳ ವಿವರಗಳನ್ನು ಬಹಿರಂಗಪಡಿಸಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ಈಗ ಕಾಂಗ್ರೆಸ್, ಶರದ್ ಪವಾರ್ ಮುಂತಾದವರೆಲ್ಲ ರೈತಗುಂಪುಗಳ ಬಂದ್ಕರೆಯನ್ನು ಬೆಂಬಲಿಸುವುದಾಗಿ ಹೇಳುತ್ತಿರುವುದು ಬೂಟಾಟಿಕೆಯ ಪರಮಾವ ಎಂದು ಜರೆದಿದ್ದಾರೆ.