ಬೀಜಿಂಗ್: ವಿಶ್ವಕ್ಕೆ ಕೊರೋನಾ ಹಬ್ಬಿಸಿದ ಮೇಲೆ ಈಗ ಕುತಂತ್ರಿ ರಾಷ್ಟ್ರ ಚೀನಾ ಸೋಂಕು ಹಬ್ಬಿದ ಬಗ್ಗೆ ಹೊಸ ಕತೆಯನ್ನು ಹೆಣೆದಿದೆ. ಕೊರೋನಾ ಹುಟ್ಟಿದ್ದು ಭಾರತದಲ್ಲಿ ಎಂದು ಸುಳ್ಳು ಆರೋಪ ಮಾಡಿದ್ದು, ಯುರೋಪ್ ನಂತರ, ಈಗ ಭಾರತವನ್ನು ಗುರಿಯಾಗಿಸಿದೆ.
2019ರ ಬೇಸಿಗೆಯಲ್ಲಿ ಭಾರತದಲ್ಲಿ ಬಹುಶಃ ವೈರಾಣು ಸೃಷ್ಟಿಯಾಗಿರಬಹುದು. ಮಲಿನಗೊಂಡ ನೀರು ಸೇವಿಸಿದ ಪ್ರಾಣಿಗಳಿಂದ ಮನುಷ್ಯರಿಗೆ ಸೋಂಕು ಹರಡಿರಬಹುದು ಎಂದು ಯಾವುದೇ ಆಧಾರರಹಿತ ಆರೋಪವನ್ನು ಚೀನಾ ಅಕಾಡೆಮಿ ಆಫ್ ಸೈನ್ಸ್ ವಿಜ್ಞಾನಿಗಳು ಮಾಡಿದ್ದಾರೆ.
ಅಲ್ಲದೇ ಹೀಗೆ ಸೋಂಕು ತಗುಲಿದ ವ್ಯಕ್ತಿ ಚೀನಾಗೆ ಭೇಟಿ ನೀಡಿದ್ದರಿಂದ ವುಹಾನ್ನಲ್ಲಿ ಮೊದಲ ಪ್ರಕರಣ ವರದಿಯಾಗಿರ ಬಹುದು. ಜತೆಗೆ ವುಹಾನ್ನಲ್ಲಿ ಪತ್ತೆಯಾದ ವೈರಾಣು ಅಲ್ಲೇ ಸೃಷ್ಟಿಯಾದದ್ದಲ್ಲ. ಬದಲಿಗೆ ಭಾರತ, ಬಾಂಗ್ಲಾದೇಶ, ಜೆಕ್, ರಷ್ಯಾ, ಸರ್ಬಿಯಾ, ಆಸ್ಟ್ರೇಲಿಯಾ, ಇಟಲಿ ಸೇರಿ ಎಂಟು ರಾಷ್ಟ್ರದ ಪೈಕಿ ಯಾವುದಾದರೂ ಒಂದು ರಾಷ್ಟ್ರದಲ್ಲಿ ಸೃಷ್ಟಿಯಾಗಿರಬಹುದು ಎಂದೂ ಹೇಳಿದ್ದಾರೆ.
ಇನ್ನು ಈ ಹಿಂದೆಯೂ ಕಪಟಿ ಚೀನಾ ಇಟಲಿ, ಅಮೆರಿಕ, ಯುರೋಪ್ ವಿರುದ್ಧ ಯಾವುದೇ ಸಾಕ್ಷಿಯಿಲ್ಲದೇ ಆರೋಪ ಮಾಡಿತ್ತು. ಆದರೆ ಭಾರತ ಸೇರಿ ವಿಶ್ವದ 140ರಾಷ್ಟ್ರಗಳು ಸೋಂಕು ಹರಡಿದ ಬಗ್ಗೆ ತನಿಖೆಯಾಗಬೇಕು ಎಂದು ವಿಶ್ವಆರೋಗ್ಯ ಸಂಸ್ಥೆಯ (ಡಬ್ಲೂಎಚ್ಒ) ಮೇಲೆ ಒತ್ತಡವೇರಿದ್ದ ಬೆನ್ನಲ್ಲೇ, ತೆಪ್ಪಗಾಗಿತ್ತು.
ಲಡಾಖ್ ಗಡಿಯಲ್ಲಿ ಭಾರತ – ಚೀನಾ ನಡುವಿನ ಬಿಕ್ಕಟ್ಟು ಮುಂದುವರಿದಿರುವ ಹಾಗೂ ಗಡಿಯಿಂದ ಮೊದಲು ಚೀನಾ ಹೆಚ್ಚುವರಿ ಸೇನೆ ಹಿಂಪಡೆಯಬೇಕೆಂದು ಪಟ್ಟು ಹಿಡಿದಿರುವ ಕಾರಣದಿಂದ ಚೀನಾ ಭಾರತವನ್ನು ಗುರಿಯಾಗಿಸಿದೆ ಎಂದು ಹೇಳಲಾಗಿದೆ.