ಕಠ್ಮಂಡು: ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಘ್ಲಾ ಹಾಗೂ ನೇಪಾಳದ ವಿದೇಶಾಂಗ ಕಾರ್ಯದರ್ಶಿ ಭರತ್ ರಾಜ್ ಪೌಡ್ಯಲ್ ನಡೆಸಿರುವ ದ್ವಿಪಕ್ಷೀಯ ಸಭೆ ಫಲಪದ್ರವಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ಸಹಕಾರ ಹೆಚ್ಚಿಸಲು ಭಾರತ-ಮತ್ತು ನೇಪಾಳ ಗುರುವಾರ ಸಮ್ಮತಿಸಿವೆ.
ಗಡಿ ವಿಚಾರ ಸಂಬಂಸಿದಂತೆ ಉಭಯ ರಾಷ್ಟ್ರಗಳ ನಡುವೆ ಉಂಟಾಗಿದ್ದ ಮನಸ್ಥಾಪದ ನಡುವೆಯೂ ಸಂಬಂಧ ಉತ್ತಮಗೊಳಿಸಲು ರಾಜತಾಂತ್ರಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ ಶ್ರಿಂಘ್ಲಾ , ನೇಪಾಳಕ್ಕೆ ಭೇಟಿ ನೀಡಿದ್ದು, ಅವರಿಗೆ ಭರಪೂರ ಸ್ವಾಗತವೂ ದೊರೆತಿದೆ.
ಬಳಿಕ ಶ್ರಿಂಘ್ಲಾ ಹಾಗೂ ಪೌಡ್ಯಲ್ ಸಭೆ ನಡೆಸಿ, ಉಭಯ ರಾಷ್ಟ್ರಗಳ ಸಹಕಾರ, ಗಡಿ ಭದ್ರತೆ ಹಾಗೂ ಪರಸ್ಪರ ಆಸಕ್ತಿದಾಯಕ ವಿಚಾರ ಸಂಬಂಸಿದಂತೆ ಚರ್ಚೆ ನಡೆಸಿದ್ದು, ಹಲವು ದ್ವಿಪಕ್ಷೀಯ ಉಪಕ್ರಮಗಳು ಹಾಗೂ ಯೋಜನೆಗಳನ್ನು ಎರಡೂ ರಾಷ್ಟ್ರಗಳು ಶ್ಲಾಘಿಸಿವೆ. ಜತೆಗೆ ಪರಸ್ಪರ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಒಪ್ಪಿಕೊಂಡಿವೆ ಎಂದು ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.