ಇಸ್ಲಾಮಾಬಾದ್: ಡ್ರೋನ್ ಬಳಸಿ ದೇಶದೊಳಗೆ ಶಸ್ತ್ರಾಸ್ತ್ರ ಬಿಸಾಡಲು ನೂತನ ಕಳ್ಳಮಾರ್ಗ ಕಂಡುಕೊಂಡಿರುವ ಕುತಂತ್ರಿ ಪಾಕಿಸ್ಥಾನದ ಯತ್ನಗಳನ್ನು ಭಾರತೀಯ ಸೇನೆ ನಿರಂತರವಾಗಿ ವಿಫಲಗೊಳಿಸುತ್ತಿರುವ ಬೆನ್ನೆಲ್ಲೇ, ಮತ್ತಷ್ಟು ಡ್ರೋನ್ ಖರೀದಿಸಲು ಪಾಕ್ ಮುಂದಾಗಿರುವುದಾಗಿ ತಿಳಿದುಬಂದಿದೆ.
ಎರಡು ದಿನದ ಹಿಂದಷ್ಟೇ ಜಮ್ಮು ಕಾಶ್ಮೀರದ ಕಥುವಾದಲ್ಲಿ ಪಾಕಿಸ್ಥಾನದ ಎರಡು ಡ್ರೋನ್ಗಳನ್ನು ಸೇನೆ ಹೊಡೆದುರುಳಿಸಿದೆ. ಡ್ರೋನ್ ಖರೀದಿಗಾಗಿ ಟರ್ಕಿ ಮೂಲದ ಬೊಗಜಿಸಿ ಸಾವುನ್ಮ ಸಂಸ್ಥೆಯೊಂದಿಗೆ ಪಾಕಿಸ್ಥಾನ ಮಾತುಕತೆಯನ್ನೂ ಆರಂಭಿಸಿದ್ದು, ಡ್ರೋನ್ ಜತೆಗೆ ಡ್ರೋನ್ ಪತ್ತೆ ಹಚ್ಚಿ ಹೊಡೆದುರುಳಿಸುವ ಯಂತ್ರಗಳನ್ನು ಖರೀದಿಸಲು ಪಾಕ್ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಅದರಲ್ಲೂ ಸೆಪ್ಟೆಂಬರ್ ಆರಂಭದಿಂದಲೇ ಮಂಗ್ಲದಲ್ಲಿರುವ 506 ಯುಎವಿ ನೆಲೆಯಲ್ಲಿ ಪಾಕಿಸ್ಥಾನ ಎಸ್- 250 ಮಿನಿ ಡ್ರೋನ್ಗಳ ಪರೀಕ್ಷೆ ನಡೆಸುತ್ತಿದ್ದು, ಭಾರತದೊಳಗೆ ಶಸ್ತ್ರಾಸ್ತ್ರ ಬಿಸಾಡಲು ಸಿದ್ಧತೆ ನಡೆಸುತ್ತಿತ್ತು ಎಂದು ಮಾಹಿತಿ ದೊರೆತಿದೆ.
ಎಸ್- 250 ಮಿನಿ ಕಣ್ಗಾವಲು ಡ್ರೋನ್ಗಳಾಗಿದ್ದು, 3 ತಾಸು ತನಕ ಹಾರಾಟ ನಡೆಸುತ್ತದೆ.ಜತೆಗೆ 150 ಕಿ.ಮೀ. ವ್ಯಾಪ್ತಿ ಹೊಂದಿದೆ. ಆದರೆ ಪಾಕ್ ಎಷ್ಟೇ ಡ್ರೋನ್ ಮೂಲಕ ಶಸ್ತ್ರಾಸ್ತ್ರ ಬಿಸಾಡಲು ಯತ್ನಿಸಿದ್ದರೂ, ಭಾರತೀಯ ಸೇನೆ ಪಾಕಿಸ್ಥಾನದ ಈ ದುರುದ್ದೇಶದ ಮೇಲೆ ತಣ್ಣೀರೇರೆದಿದೆ.