ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ. ಕೇಂದ್ರಾಡಳಿತ ಪ್ರದೇಶದ ರಾಜಕೀಯ ಪಕ್ಷಗಳ ಮೈತ್ರಿಯು ಒಂದು ‘ಗುಪ್ಕರ್ ಗ್ಯಾಂಗ್’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಲ್ಲದೆ ಇದು ದೇಶದ ಶತಕೋಟಿ ನಾಗರಿಕರ ಹಿತಾಸಕ್ತಿಗೆ ವಿರುದ್ಧವಾದ “ಅಪವಿತ್ರ ಜಾಗತಿಕ ಘಟಬಂಧನ್” ಎಂದಿದ್ದಾರೆ.
370 ನೇ ವಿಧಿಯನ್ನು ಪುನಃಸ್ಥಾಪಿಸಲು ಒತ್ತಾಯಿಸಿ ರಚಿಸಲಾದ ಜಮ್ಮು ಮತ್ತು ಕಾಶ್ಮೀರದ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳ ಸಂಘಟನೆಯಾದ ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ) ಗೆ ನಿಮ್ಮ ಬೆಂಬಲವಿದೆಯೆ ಎಂದು ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಹೆಸರು ಉಲ್ಲೇಖಿಸಿ ಶಾ ಸರಣಿ ಟ್ವೀಟ್ ಗಳ ಮೂಲಕ ಪ್ರಶ್ನಿಸಿದ್ದಾರೆ.
“ಜಮ್ಮು ಮತ್ತು ಕಾಶ್ಮೀರವು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯಲಿದೆ. ನಮ್ಮ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಅಪವಿತ್ರವಾದ ‘ಜಾಗತಿಕ ಘಟಬಂಧನ್’ ಅನ್ನು ಭಾರತೀಯ ಜನರು ಇನ್ನು ಮುಂದೆ ಸಹಿಸುವುದಿಲ್ಲ. ಒಂದೋ ಗುಪ್ಕರ್ ಗ್ಯಾಂಗ್ ರಾಷ್ಟ್ರೀಯ ಮನಸ್ಥಿತಿಯೊಡನೆ ಈಸಲಿದೆ ಇಲ್ಲವೇ ಜನರು ಅದನ್ನು ಮುಳುಗಿಸಲಿದ್ದಾರೆ”
ಕಾಂಗ್ರೆಸ್ ಮತ್ತು ‘ಗುಪ್ಕರ್ ಗ್ಯಾಂಗ್’ ಜಮ್ಮು ಮತ್ತು ಕಾಶ್ಮೀರವನ್ನು ಭಯೋತ್ಪಾದನೆ ಮತ್ತು ಪ್ರಕ್ಷುಬ್ಧತೆಯ ಯುಗಕ್ಕೆ ಹಿಂತಿರುಗುವಂತೆ ಮಾಡಲು ಉದ್ದೇಶಿಸಿದೆ. ಅಲ್ಲದೆ ನಾವು ತೆಗೆದು ಹಾಕಿದ್ದ “370 ನೇ ವಿಧಿಯನ್ನು ಮರುಸ್ಥಾಪಿಸುವ ಮೂಲಕ ವ ದಲಿತರು, ಮಹಿಳೆಯರು ಮತ್ತು ಬುಡಕಟ್ಟು ಜನಾಂಗದವರ ಹಕ್ಕುಗಳನ್ನು ಕಸಿದುಕೊಳ್ಳಲು ಬಯಸುತ್ತಾರೆ” ಎಂದು ಶಾ ಹೇಳಿದರು.
ಇದೇ ಕಾರಣದಿಂದ ಜನರು ಎಲ್ಲೆಡೆ ಅವರನ್ನು ತಿರಸ್ಕರಿಸುತ್ತಿದ್ದಾರೆ.
“ಗುಪ್ಕರ್ ಗ್ಯಾಂಗ್ ಜಾಗತಿಕ ಮಟ್ಟಕ್ಕೆ ವಿಸ್ತರಿಸಿಕೊಳ್ಳುತ್ತಿದೆ! ಜಮ್ಮು ಮತ್ತು ಕಾಶ್ಮೀರದಲ್ಲಿ ವಿದೇಶಿ ಪಡೆಗಳು ಮಧ್ಯಪ್ರವೇಶಿಸಬೇಕೆಂದು ಅವರು ಬಯಸುತ್ತಾರೆ. ಗುಪ್ಕರ್ ಗ್ಯಾಂಗ್ ಭಾರತದ ತ್ರಿವರ್ಣ ಧ್ವಜವನ್ನು ಅವಮಾನಿಸುತ್ತದೆ. ಗುಪ್ಕರ್ ಗ್ಯಾಂಗ್ ನ ಇಂತಹ ನಡೆಗಳನ್ನು ಸೋನಿಯಾ ಮತ್ತು ರಾಹುಲ್ ಗಾಂಧಿ ಬೆಂಬಲಿಸುತ್ತಾರೆಯೇ? ಅವರು ತಮ್ಮ ನಿಲುವನ್ನು ದೇಶದ ಜನರ ಮುಂದೆ ಸ್ಪಷ್ಟಪಡಿಸಬೇಕು” ಶಾ ಹೇಳಿದ್ದಾರೆ.