
ಹೈದರಾಬಾದ್: ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇ – ಬೋರ್ಡಿಂಗ್ ಪಾಸ್ ವ್ಯವಸ್ಥೆ ಜಾರಿಗೆ ಬಂದಿದ್ದು, ಇಂತಹ ಸೌಲಭ್ಯ ಇರುವ ದೇಶದ ಮೊದಲ ವಿಮಾನನಿಲ್ದಾಣ ಎನಿಸಿಕೊಂಡಿದೆ.
ಆತ್ಮನಿರ್ಭರ ಭಾರತ ಅಭಿಯಾನದ ಅನ್ವಯ ದೇಶೀಯವಾಗಿಯೇ, ಇ – ಬೋರ್ಡಿಂಗ್ ಪಾಸ್ ನೀಡುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ವಿಮಾನ ನಿಲ್ದಾಣಗಳಲ್ಲಿ ಪಾಸ್ಗಾಗಿ ಕಾಯುವ ಅಗತ್ಯವಿರುವುದಿಲ್ಲ. ಅಲ್ಲದೇ ಕೊರೋನಾ ಮುಂಜಾಗ್ರತೆಗೂ ಇದು ಸಹಕಾರಿಯಾಗಲಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಈ ಸೌಲಭ್ಯ ಅನ್ವಯವಾಗಲಿದೆ ಎಂದು ಜಿಎಂಆರ್ ಸಂಸ್ಥೆ ತಿಳಿಸಿದೆ. ಜತೆಗೆ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನಕ್ಕೂ ಪೂರಕವಾಗಿದೆ. ಸದ್ಯ ಈ ವ್ಯವಸ್ಥೆ ಇಂಡಿಗೋ ವಿಮಾನಯಾನ ಸಂಸ್ಥೆಯ ನಿರ್ದಿಷ್ಟಿತ ವಿಮಾನಗಳ ಪ್ರಯಾಣಕ್ಕೆ ಮಾತ್ರವೇ ಅನ್ವಯಿಸುತ್ತದೆ.
ಇದು ಭಾರತೀಯ ನಾಗರಿಕ ವಿಮಾನಯಾನ ಕ್ಷೇತ್ರದಲ್ಲೇ ಮೈಲಿಗಲ್ಲಾಗಿದೆ. ಇದುವರೆಗೆ ಪ್ರಯಾಣಿಕರು ವಿಮಾನನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಪಡೆಯಲು ಸಾಲುಗಟ್ಟಿ ನಿಲ್ಲಬೇಕಿತ್ತು ಎಂದು ಸಂಸ್ಥೆ ಹೇಳಿದೆ.