
ಲಡಾಖ್: ಲಡಾಖ್ನ ಚುಮಾರ್-ಡೆಮ್ಚೋಕ್ ಪ್ರದೇಶದಲ್ಲಿ ಚೀನಾದ ಸೇನೆಗೆ ಸೇರಿದ್ದ ಸೈನಿಕನೊಬ್ಬನನ್ನು ಭಾರತೀಯ ಭದ್ರತಾ ಪಡೆ ಬಂಧಿಸಿದೆ.
ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಸೈನಿಕ ಅಜಾಗರೂಕತೆಯಿಂದ ಭಾರತೀಯ ಭೂಪ್ರದೇಶವನ್ನು ಪ್ರವೇಶಿಸಿರಬಹುದು ಎನ್ನಲಾಗಿದ್ದು ವಶಕ್ಕೆ ಪಡೆದ ಸೈನಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ತನಿಖೆ ಮುಗಿದ ನಂತರ ಪ್ರೋಟೋಕಾಲ್ ಪ್ರಕಾರ ಅವನನ್ನು ಚೀನಾಗೆ ವಾಪಾಸ್ ಕಳಿಸಲಾಗುತ್ತದೆ ಎಂದು ಸುದ್ದಿ ಸಂಸ್ಥೆ ಎಎನ್ಐ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
ಲಡಾಖ್ ನಲ್ಲಿ ನಡೆಯುತ್ತಿರುವ ಗಡಿ ಸಂಘರ್ಷದ ನಡುವೆ ಈ ಬೆಳವಣಿಗೆ ನಡೆದಿರುವ ಕಾರಣ ತನಿಖಾ ಸಂಸ್ಥೆಗಳು ಗೂಢಚರ್ಯೆ ದೃಷ್ಟಿಕೋನದಿಂದ ತನಿಖೆ ಕೈಗೊಂಡಿವೆ. ಚೀನಾ ಸೇನೆ ಈ ಭಾಗದ ಭಾರತೀಯ ಸೈನ್ಯದ ತಾಣಗಳ ಮೇಲೆ ಬೇಹುಗಾರಿಕೆ ನಡೆಸಿರಬಹುದೆಂದು ಶಂಕಿಸಲಾಗಿದೆ.