ಬೆಂಗಳೂರು: ನಾಮಪತ್ರ ಸಲ್ಲಿಕೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ದೂರು ದಾಖಲಾಗಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಂಡಾಮಂಡಲರಾಗಿಧಾರೆ.
ಗುರುವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೆಣ್ಣು ಮಕ್ಕಳ ವಿರುದ್ಧ ದೌರ್ಜನ್ಯ ಎಸಗಿ ನೀಚ ರಾಜಕಾರಣ ಮಾಡಲಾಗುತ್ತಿದೆ ಎಂದು ಆಕ್ರೋಶಭರಿತರಾಗಿ ನುಡಿದರು. ಅಷ್ಟೇ ಅಲ್ಲದೆ, ಚುನಾವಣೆ ಆಯೋಗಕ್ಕೆ ದೂರು ಕೊಡುವುದಾಗಿಯೂ ಹೇಳಿದರು.
ಇದಕ್ಕೆ ತಿರುಗೇಟು ನೀಡಿರುವ ಆಡಳಿತಾರೂಢ ಬಿಜೆಪಿ ನಾಯಕರು, ಅಭ್ಯರ್ಥಿ ವಿರುದ್ಧ ದೂರು ದಾಖಲಿಸಿದರೆ ಬಿಜೆಪಿಗೇನು ಹೆಚ್ಚು ಮತಗಳು ಸಿಗುತ್ತವೆಯೇ ? ಚುನಾವಣಾಕಾರಿಗಳು,ಪೊಲೀಸರು ಕಾನೂನು ಪ್ರಕಾರ ಕೈಗೊಂಡಿದ್ದಾರೆ. ಅಷ್ಟಕ್ಕೇಕೆ ಡಿಕೆಶಿ ಸಿಟ್ಟಾಗಬೇಕು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಧ್ವನಿಗೂಡಿಸಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಅವರು ಹಿಂದೆ ಚುನಾವಣೆಗಳನ್ನು ಹೇಗೆಲ್ಲ ನಡೆಸಿದ್ದಾರೆಂಬುದು ಗೊತ್ತೇ ಇದೆ. ಅವರು ಮರೆತಿರಬಹುದಷ್ಟೇ ಎಂದಿದ್ದಾರೆ.