ಬಳ್ಳಾರಿ: ಸಚಿವ ಬಿ.ಶ್ರೀರಾಮುಲು ಅವರಿಗೆ ಆರೋಗ್ಯ ಇಲಾಖೆ ಖಾತೆ ಕೈ ತಪ್ಪಿದ್ದು, ಅದರ ಬದಲಾಗಿ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಿರುವುದು ಜಿಲ್ಲೆಯಲ್ಲಿ ನಾನಾ ಚೆರ್ಚೆಗಳು ಗರಿಗೆದರಿವೆ.
ಶ್ರೀರಾಮುಲು ಅವರು ನಿಭಾಯಿಸುತ್ತಿದ್ದ ಆರೋಗ್ಯ ಖಾತೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೆಗಲೇರಿದೆ. ಸಚಿವ ಗೋವಿಂದ ಕಾರಜೋಳ ಬಳಿ ಹೆಚ್ಚುವರಿಯಾಗಿದ್ದ ಸಮಾಜ ಕಲ್ಯಾಣ ಇಲಾಖೆಯನ್ನು ಸಚಿವ ಬಿ. ಶ್ರೀರಾಮುಲು ಅವರಿಗೆ ಹಂಚಿಕೆ ಮಾಡಲಾಗಿದೆ. ಇದು ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಸಚಿವರ ಬೆಂಬಲಿಗರು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಬಲಿಗರ ಆಕ್ರೋಶ
ಬಿಜೆಪಿ ಯುವ ಮುಖಂಡ ಬಿ.ಶಿವಕುಮಾರ್ ಮಾತನಾಡಿ, ಆರೋಗ್ಯ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದ ಅವರನ್ನು ದಿಢೀರ್ನೇ ಖಾತೆ ಬದಲಾವಣೆ ಮಾಡಿರುವುದು ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಮಾಡುವುದಿದ್ದರೆ ಸಂಪುಟ ಪುನರ್ ರಚನೆ ವೇಳೆ ಮಾಡಬಹುದಿತ್ತು. ಇದಕ್ಕೆ ಜನರಿಗೆ ಏನು ಹೇಳಬೇಕು ಎನ್ನುವುದು ಗೊಂದಲ ಉಂಟಾಗಿದೆ ಇದು ನಮಗೆ ಬೇಸರ ತಂದಿದೆ ಎಂದರು.
ಬಡವರ ಪರವಾಗಿ ವಿಶೇಷ ಕಾಳಜಿ ಇಟ್ಟುಕೊಂಡು ಶ್ರಮಿಸುತ್ತಿದ್ದ ಅವರಿಗೆ ಆರಂಭದಲ್ಲೇ ಆರೋಗ್ಯ ಖಾತೆ ವಹಿಸಿರುವುದಕ್ಕೆ ರಾಜ್ಯದ ಜನರು ಸಂಭ್ರಮಿಸಿದ್ದರು. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಖಾತೆಯನ್ನೇ ನಿಭಾಯಿಸಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ದೊರೆಯಲು 108 ಆ್ಯಂಬುಲೆನ್ಸ್ ಸೇವೆ, ಮಡಿಲು ಕಿಟ್ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ರಾಜ್ಯದಲ್ಲೇ ಮಾದರಿಯಾಗಿದ್ದರು ಎಂದರು.
ಸಿದ್ದರಾಮಯ್ಯಗೆ ಟಾಂಗ್ ನೀಡಲು ಖಾತೆ ?
ನಾನಾ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಕುರುಬ ಸಮುದಾಯದವರನ್ನು ಎಸ್ಟಿಗೆ ಸೇರ್ಪಡೆ ಮಾಡಿ ಎಂದು ಒತ್ತಾಯ, ಪ್ರತಿಭಟನೆಗಳು ಜೋರಾಗಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಇಲಾಖೆ ಖಾತೆ ನೀಡಲಾಗಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ.
ಒಂದು ವೇಳೆ ಎಸ್ಟಿಗೆ ಸೇರ್ಪಡೆ ಮಾಡಬೇಕಾದರೆ ಸಮಾಜ ಕಲ್ಯಾಣ ಇಲಾಖೆಯಿಂದ ಶಿಫಾರಸು ಮಾಡಬೇಕಾಗಲಿದೆ. ಇದನ್ನು ತಡೆಯಲು, ಎದುರಾದ ಈ ಸಮಸ್ಯೆಯನ್ನು ಸರಿಪಡಿಸಲು ಸರ್ಕಾರ ಸಚಿವ ಶ್ರೀರಾಮುಲು ಅವರಿಗೆ ವಹಿಸಲಾಗಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ.