ಕನ್ನಡ ವಿವಿ ಅಭಿವೃದ್ಧಿಗೆ ಡಿಎಂಎಫ್‍ನಿಂದ ರೂ.10 ಕೋಟಿ: ಡಿಸಿಎಂ ಅಶ್ವತ್ಥನಾರಾಯಣ

ಬಳ್ಳಾರಿ: ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿನ ಮೂಲಸೌಕರ್ಯಗಳ ಅಭಿವೃದ್ಧಿಗೆ ಜಿಲ್ಲಾ ಖನಿಜ ನಿಯಿಂದ 10 ಕೋಟಿ ರೂ.ಒದಗಿಸಲಾಗುತ್ತಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಸಮ್ಮತಿಸಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸಂಗೀತ ವಿಭಾಗದ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿದ ನಂತರ ಮಾತನಾಡಿದರು. ಡಿಎಂಎಫ್‍ನಿಂದ ಲಭ್ಯವಾಗುವ 10 ಕೋಟಿ ರೂ.ಗಳಲ್ಲಿ ವಿಶ್ವವಿದ್ಯಾಲಯವು ಬೇಸಿಗೆ ಸಂದರ್ಭದಲ್ಲಿ ಎದುರಿಸುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮತ್ತು ವಿವಿಯ 750 ಎಕರೆ ವಿಶಾಲವಾದ ವ್ಯಾಪ್ತಿಗೆ ಕಂಪೌಂಡ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.
ಕನ್ನಡ ವಿವಿಗೆ ಎಲ್ಲ ರೀತಿಯಿಂದಲೂ ಸಮೃದ್ಧವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಹಂಪಿ ವಿವಿಯ ಭೋದಕೇತರ ಸಿಬ್ಬಂದಿಗೆ ಕಳೆದ ಹಲವು ತಿಂಗಳಿಂದ ವೇತನದ ಸಮಸ್ಯೆ ಇರುವುದನ್ನು ಗಮನಕ್ಕೆ ಬಂದಿದ್ದು, ಅದನ್ನು ಆದಷ್ಟು ಶೀಘ್ರ ಬಗೆಹರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ನ.17 ರಿಂದ ಉನ್ನತ ಶಿಕ್ಷಣ ಕಾಲೇಜುಗಳ ಆರಂಭಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪೊಷಕರಿಂದ ನಿರಾಪೇಕ್ಷಣ ಪತ್ರ ಮತ್ತು ಕೋವಿಡ್ ಪರೀಕ್ಷೆ ಮಾಡಿಕೊಂಡು ಸೋಂಕು ರಹಿತರೆಂಬ ಪ್ರಮಾಣ ಪತ್ರ ತೆಗೆದುಕೊಂಡು ಬರಬೇಕು. ಕೋವಿಡ್ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ ಎಂದರು.
ನಮ್ಮ ಇಲಾಖೆಯಲ್ಲಿ ವಿವಿಗಳ ಉಪ ಕುಲಪತಿಗಳ ನೇಮಕದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ, ಎಲ್ಲವೂ ಪಾರದರ್ಶಕವಾಗಿ ನಡೆದಿದೆ. ಪೊ.ಅಶೋಕ್ ಕುಮಾರ್ ಆತ್ಮಹತ್ಯೆ ಕುರಿತು ಕೆಪಿಸಿಸಿ ಅಧ್ಯಕ್ಷರು ಮಾಡಿರುವ ಆರೋಪ ಶುದ್ಧ ಸುಳ್ಳು ಎಂದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಕುಲಪತಿ ಡಾ.ಸ.ಚಿ.ರಮೇಶ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ