ಲಖನೌ: ಘಾಜಿಯಾಬಾದ್ಗೆ ಕೋವಿಡ್ ನೋಡಲ್ ಅಕಾರಿಯಾಗಿ ಜುಲೈನಲ್ಲಿ ನೇಮಕಗೊಂಡಿದ್ದ ಮೋದಿನಗರ ಉಪವಿಭಾಗದ ಜಿಲ್ಲಾಕಾರಿ ಸೌಮ್ಯಾ ಪಾಂಡೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಹೆರಿಗೆಯಾದ 15 ದಿನದಲ್ಲೇ ನವಜಾತ ಶಿಶುವಿನೊಂದಿಗೆ ಕರ್ತವ್ಯಕ್ಕೆ ಮರುಹಾಜರಾಗಿ ಕರ್ತವ್ಯನಿಷ್ಠೆ ಮೆರೆದಿದ್ದಾರೆ.
ನಾನು ಐಎಎಸ್ ಅಕಾರಿ ನನ್ನ ಕರ್ತವ್ಯವನ್ನು ಮರೆಯುವಂತಿಲ್ಲ, ಕೊರೋನಾದಿಂದಾಗಿ ಎಲ್ಲರಿಗೂ ಒಂದು ಜವಾಬ್ದಾರಿ ಇದೆ. ಅಂತೆಯೇ, ಇದು ನನ್ನ ಕರ್ತವ್ಯ. ನಾನು ಮಾಡಲೇಬೇಕು ಹಾಗಾಗಿ ಮಗುವಿನೊಂದಿಗೆ ಕಚೇರಿಗೆ ಹಾಜರಾಗಿದ್ದೇನೆ ಎಂದು ಸೌಮ್ಯಾ ತಿಳಿಸಿದ್ದಾರೆ.
ಕರ್ತವ್ಯಕ್ಕೆ ಮರುಹಾಜರಾಗಲು ನನ್ನ ಕುಟುಂಬದ ಪೊತ್ಸಾಹವೂ ದೊರಕಿದ್ದು, ಸರ್ಕಾರಿ ಅಕಾರಿಯಾಗಿ ನಾನು ಸಲ್ಲಿಸಬೇಕಾದ ಸೇವೆಗೆ ಅವರೂ ಬೆಂಬಲ ನೀಡಿದ್ದಾರೆ. ಇನ್ನು ನಾನು ಗರ್ಭಾವಸ್ಥೆಯಲ್ಲಿದ್ದಾಗಲೂ ಘಾಜಿಯಾಬಾದ್ ಜಿಲ್ಲಾಡಳಿತದ ಸಂಪೂರ್ಣ ಸಿಬ್ಬಂದಿ ನನಗೆ ಕುಟುಂಬಸ್ಥೆಯ ಸ್ಥಾನ ನೀಡಿ ಪೊತ್ಸಾಹಿಸಿದ್ದಾರೆ. ಮನೆಯವರಂತೆಯೇ ಕಾಳಜಿ ತೋರಿದ್ದಾರೆ. ನಾನು ಕರ್ತವ್ಯ ಪಾಲಿಸಲು ಸಿಬ್ಬಂದಿಯ ಕಾಳಜಿಯೂ ಕಾರಣವಾಗಿದ್ದು, ಅವರಿಗೆ ಧನ್ಯವಾದ ಎಂದಿದ್ದಾರೆ.
ಜತೆಗೆ ಕೊರೋನಾ ಬಿಕ್ಕಟ್ಟಿರುವ ಹಿನ್ನೆಲೆ ಗರ್ಭಿಣಿಯರು ಕೆಲಸ ನಿರ್ವಹಿಸುತ್ತಿದ್ದಾರೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲೇಬೇಕು ಎಂಬ ಸಲಹೆಯನ್ನೂ ಸೌಮ್ಯಾ ನೀಡಿದ್ದಾರೆ.
ಜುಲೈನಿಂದ ಸೆಪ್ಟೆಂಬರ್ವರೆಗೆ ನೋಡಲ್ ಅಕಾರಿಯಾಗಿದ್ದ ಅವರು, ಸೆಪ್ಟೆಂಬರ್ನಲ್ಲಿ ಹೆರಿಗೆ ಸಮಯದಲ್ಲಿ 22 ದಿನ ರಜೆ ತೆಗೆದುಕೊಂಡಿದ್ದು, ಹೆರಿಗೆಯಾದ ಎರಡು ವಾರದ ನಂತರ ಕಚೇರಿಗೆ ವಾಪಸಾಗಿದ್ದಾರೆ ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ.