ಧಾರವಾಡ: ದೇಶ ಹಾಗೂ ರಾಜ್ಯದಲ್ಲಿ ಸದ್ಯ ಬಿಜೆಪಿ ಮಾತ್ರ ತೇಲುವ ಹಾಗೂ ಓಡುವ ಹಡಗು. ಕಾಂಗ್ರೆಸ್ ಪಕ್ಷ ಮುಳಗುವ ಹಡಗು ಎಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲು ವ್ಯಂಗ್ಯವಾಡಿದರು.
ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ಪೂರ್ವಸಿದ್ಧತಾ ಸಭೆ ಹಾಗೂ ಸಂಕನೂರರ 6 ವರ್ಷಗಳ ಸಾಧನೆ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂ ಜಾಮೀನು ಮೇಲಿದ್ದಾರೆ. ಇನ್ನೂ ಕಾಂಗ್ರೆಸ್ ನಾಯಕರ ವಿರುದ್ಧ ಒಂದಿಲ್ಲೊಂದು ಪ್ರಕರಣದ ಆರೋಪಗಳು ಕೇಳಿಬರುತ್ತಿವೆ ಎಂದು ದೂರಿದರು.
ಅಲ್ಲದೇ, ಇದೀಗ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಮನೆ ಮೇಲೆ ಸಿಬಿಐ ದಾಳಿ ಮಾಡಿದೆ. ಆದರೆ, ವಿಪಕ್ಷಗಳು ಇದನ್ನು ರಾಜಕೀಯ ಪ್ರೇರಿತ ಎಂದು ಬಿಂಬಿಸುತ್ತಿವೆ ಎಂದು ಆಪಾದಿಸಿದರು.
ಸಿಬಿಐ 70 ವರ್ಷದ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿದ್ದಾಗ ಅದೇಷ್ಟು ಭಾರಿ ಬಿಜೆಪಿ ನಾಯಕರ ಮನೆ ಮೇಲೆ ದಾಳಿ ನಡೆದಿಲ್ಲ? ಬಿಜೆಪಿ ನಾಯಕರು ಎಂದಾದರೂ ರಾಜಕೀಯ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.
ಇಡೀ ಜಗತ್ತೇ ನರೇಂದ್ರ ಮೋದಿ ನಾಯಕತ್ವ ಒಪ್ಪಿಕೊಂಡಿದೆ. ಆದರೆ, ಕಾಂಗ್ರೆಸ್ ಮಾತ್ರ ತಮ್ಮ ನಾಯಕರ ತಪ್ಪು ಮುಚ್ಚಿಡಲು ಬಿಜೆಪಿ ಕಡೆಗೆ ಬೊಟ್ಟು ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಜಾತ್ಯಾತೀತ ಜನತಾ ದಳ(ಜೆಡಿಎಸ್) ಕುಟುಂಬ ರಾಜಕಾರಣದಲ್ಲಿ ತೊಡಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಭವಿಷ್ಯದಲ್ಲಿ ಅಸ್ತಿತ್ವವೇ ಇಲ್ಲ ಎಂದು ಕುಟುಕಿದರು.
ರಾಜ್ಯದಲ್ಲೀಗ ಶಿರಾ ಹಾಗೂ ಆರ್.ಆರ್.ನಗರ ವಿಧಾನಸಭೆಗೆ ಉಪಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು.
ಭಾರತೀಯ ಜನತಾ ಪಕ್ಷದಲ್ಲಿ ಸಂಘಟನೆ ಉತ್ತಮವಾಗಿದೆ. ಹೀಗಾಗಿ ಕಾರ್ಯಕರ್ತರು ಪ್ರೊ. ಎಸ್.ವಿ.ಸಂಕನೂರ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಬೃಹತ್-ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಕಾಂಗ್ರೆಸ್ ಅವಸಾನದ ಹಂಚಿಗೆ ತಲುಪಿದರೆ, ಜೆಡಿಎಸ್ಗೆ ಅಸ್ತತ್ವವೇ ಇಲ್ಲ. ಭ್ರಮನಿರಸಗೊಂಡ ಈ ಪಕ್ಷದ ನಾಯಕರು ಬಿಜೆಪಿ ಸೇರುವುದು ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಅಮೃತ ದೇಸಾಯಿ, ಕಳಕಪ್ಪ ಬಂಡಿ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣುಕುಮಾರ, ಪ್ರೊ. ಎಸ್.ವಿ.ಸಂಕನೂರ, ಪ್ರದೀಪ ಶೆಟ್ಟರ್ ಅನೇಕರು ಇದ್ದರು.