ಹೊಸದಿಲ್ಲಿ : ಎಲ್ಲ ರೋಗಿಗಳಿಗೂ ಖಾಸಗಿ ಆಸ್ಪತ್ರೆಗಳು ಕೂಡ ಉಚಿತವಾಗಿ ಕೊರೋನಾ ಪರೀಕ್ಷೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪಿಗೆ ಬದಲಾವಣೆ ಮಾಡಲಾಗಿದ್ದು, ಕೇವಲ ಬಡವರಿಗೆ ಕೊರೋನಾ ಪರೀಕ್ಷೆ ಉಚಿತವಾಗಿ ನಡೆಸಬೇಕೆಂದು ಸುಪ್ರೀಂಕೋರ್ಟ್ ಸೋಮವಾರ ಆದೇಶಿಸಿದೆ.
ಕಳೆದ ವಾರ ಎಲ್ಲ ರೋಗಿಗಳಿಗೂ ಖಾಸಗಿ ಆಸ್ಪತ್ರೆಗಳು ಕೂಡ ಉಚಿತವಾಗಿ ಕೊರೋನಾ ಪರೀಕ್ಷೆ ನಡೆಸಬೇಕೆಂದು ಆದೇಶಿಸಿತ್ತು. ಆದರೆ ವೈದ್ಯಕೀಯ ಸಂಸ್ಥೆಗಳೂ ಸದ್ಯ ಆರ್ಥಿಕ ಸವಾಲು ಎದುರಿಸುತ್ತಿದ್ದು, ಎಲ್ಲರಿಗೂ ಉಚಿತ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಖಾಸಗಿ ಆಸ್ಪತ್ರೆಗಳು ಕೋರ್ಟ್ಗೆ ತಿಳಿಸಿದ್ದವು.
ಹಾಗಾಗಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯಯೋಜನೆ ಅಥವಾ ಇತರೆ ಯೋಜನೆಗಳ ಅನ್ವಯ, ಆರ್ಥಿಕವಾಗಿ ಹಿಂದುಳಿದವರು ಮಾತ್ರ ಉಚಿತವಾಗಿ ಕೊರೋನಾ ಪರೀಕ್ಷೆ ಪಡೆಯಬಹುದು ಎಂದು ಕೋರ್ಟ್ ತಿಳಿಸಿದೆ.
ಆದರೆ ಯಾರೂ ಆರ್ಥಿಕವಾಗಿ ಹಿಂದುಳಿದವರು ಎಂಬುದನ್ನು ಅಂತಿಮವಾಗಿ ನಿರ್ಧರಿಸುವ ಹಕ್ಕು ಕೇಂದ್ರ ಸರ್ಕಾರ ಹಾಗೂ ಕೆಂದ್ರ ಆರೋಗ್ಯ ಸಚಿವಾಲಯಕ್ಕೆ ಬಿಟ್ಟದ್ದು ಎಂದೂ ಕೋರ್ಟ್ ಹೇಳಿದೆ.