ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೋನಾ ವೈರಸ್ ದೃಢಪಟ್ಟು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದ ಕೊಂಡಂಗೇರಿಯ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಮಂಗಳವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಸದ್ಯದ ಮಟ್ಟಿಗೆ ಕೊಡಗು ಕೊರೋನಾ ಮುಕ್ತ ಜಿಲ್ಲೆಯಾಗಿ ಮಾರ್ಪಟ್ಟಿದೆ.
ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಮೊದಲ ಪ್ರಕರಣ ಮಾ.19ರಂದು ಪತ್ತೆಯಾಗಿತ್ತು. ದುಬೈನಿಂದ ಆಗಮಿಸಿದ್ದ ಕೊಂಡಂಗೇರಿ ಗ್ರಾಮದ ಕೊತ್ತ್ತಿಮೊಟ್ಟೆ ನಿವಾಸಿ, 35ರ ಹರೆಯದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಇರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿತ್ತು.
ಮಾ.15ರಂದು ಇಂಡಿಗೋ (ನಂ.6ಇ96) ವಿಮಾನದಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆ ವ್ಯಕ್ತಿ ಮಾ.16ರ ಬೆಳಗಿನ ಜಾವ ಮೂರ್ನಾಡಿಗೆ ತಲುಪಿ ಅಲ್ಲಿಂದ ಆಟೋದಲ್ಲಿ ಕೊಂಡಂಗೇರಿಯ ಕೊತ್ತಿಮೊಟ್ಟೆಯಲ್ಲಿರುವ ಅವರ ಮನೆಗೆ ತೆರಳಿದ್ದರು. ಬಳಿಕ ಮಾ.17ರಂದು ಅವರು ನಗರದ ಜಿಲ್ಲಾಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾಗಿದ್ದು, ಮಾ.19ರಂದು ಅವರಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು.
ನಿರಂತರ ವೈದ್ಯಕೀಯ ಚಿಕಿತ್ಸೆ ಬಳಿಕ ಇದೀಗ ಆ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ಸರ್ಕಾರದ ನಿರ್ದೇಶನದಂತೆ ಮಂಗಳವಾರ ಮಡಿಕೇರಿಯ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಆದರೂ ಆ ವ್ಯಕ್ತಿಯನ್ನು 14 ದಿನಗಳ ಗೃಹ ಸಂಪರ್ಕ ತಡೆಯಲ್ಲಿ ಇಡಲಾಗುವುದು ಮತ್ತು ಸದರಿ ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ನಿಯಮಿತವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ವತಿಯಿಂದ ಗಮನಿಸಲಾಗುವುದು ಎಂದು ಜಿಲ್ಲಾಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ದೃಢಪಟ್ಟಿದ್ದ ಒಂದು ಪ್ರಕರಣ ಸಂಪೂರ್ಣವಾಗಿ ಗುಣಮುಖವಾಗಿರುವುದರಿಂದ, ಜಿಲ್ಲೆಯಲ್ಲಿ ಪ್ರಸಕ್ತ ಕೊರೋನಾ ಸೋಂಕಿನ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.