ಕರ್ನಾಟಕ-ಕೇರಳ `ಕೊರೋನಾ ‘ಗಡಿ ವಿವಾದ : ಕಾಸರಗೋಡಿನ ತುರ್ತು ಚಿಕಿತ್ಸೆಯ ಅಗತ್ಯವುಳ್ಳವರಿಗೆ ಅನುಮತಿ ಪ್ರಕಟ

ಹೊಸದಿಲ್ಲಿ : ಕರ್ನಾಟಕ ಮತ್ತು ಕೇರಳ ನಡುವಿನ ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.ಇದರಂತೆ, ಕೊರೋನಾ ವೈರಾಣು ಪೀಡಿತೇತರ ತುರ್ತು ಆರೋಗ್ಯ ಚಿಕಿತ್ಸೆಯ ಅಗತ್ಯವುಳ್ಳವರಿಗೆ ಸೂಕ್ತ ವೈದ್ಯಕೀಯ ಪ್ರಮಾಣಪತ್ರದೊಂದಿಗೆ ದ.ಕ.ಜಿಲ್ಲೆಗೆ ಪ್ರವೇಶಿಸಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಕೇರಳದ ಕಾಸರಗೋಡಿನ ಕೊರೋನಾ ಸೋಂಕಿತರಲ್ಲದ ಇತರ ರೋಗಿಗಳಿಗೆ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಕರ್ನಾಟಕ ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಉಭಯ ರಾಜ್ಯಗಳ ನಡುವಿನ ಗಡಿ ಬಂದ್ ವಿವಾದ ಇತ್ಯರ್ಥವಾಗಿದೆ ಎಂಬುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಂಗಳವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.

ಏ. 3ರಂದು ಸುಪ್ರೀಂ ಕೋರ್ಟ್ ಆದೇಶದ ನಿರ್ದೇಶನದಂತೆ, ಗಡಿ ಬಂದ್ ವಿಚಾರಕ್ಕೆ ಸಂಬಂಸಿ ಕೇಂದ್ರ ಗೃಹ ಕಾರ್ಯದರ್ಶಿಯವರು ಕರ್ನಾಟಕ ಮತ್ತು ಕೇರಳ ಸರ್ಕಾರಗಳ ಮುಖ್ಯ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದರಂತೆ, ಸೂಕ್ತ ವೈದ್ಯಕೀಯ ಪ್ರಮಾಣಪತ್ರವನ್ನು ಹಾರಜುಪಡಿಸಿ ಆಂಬುಲೆನ್ಸ್ ಮೂಲಕ ರೋಗಿಗಳನ್ನು ಕೇರಳದಿಂದ ಕರ್ನಾಟಕದ ಆಸ್ಪತ್ರೆಗೆ ದಾಖಲಿಸಲು ಒಪ್ಪಿಗೆ ನೀಡಲಾಗಿದೆ ಎಂದು ಮೆಹ್ತಾ ತಿಳಿಸಿದರು.

ಸಾಲಿಸಿಟರ್ ಜನರಲ್ ಅವರ ಈ ಮಾಹಿತಿ ನೀಡಿದ ಬಳಿಕ ಕರ್ನಾಟಕ ಮತ್ತು ಕೇರಳ ಸರ್ಕಾರಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದೆ.

ಲಾಕ್ ಡೌನ್ ನಂತರ ಕರ್ನಾಟಕ ಸರ್ಕಾರ ಕೇರಳ ಗಡಿ ಬಂದ್ ಮಾಡಿತ್ತು. ಗಡಿ ತೆರೆಯಬೇಕು ಎಂಬ ವಿಚಾರದಲ್ಲಿ ಕರ್ನಾಟಕ ಮತ್ತು ಕೇರಳದ ನಡುವೆ ಪತ್ರ ವ್ಯವಹಾರಗಳು, ರಾಜಿ ಸಂಧಾನಗಳು, ಗಡಿ ತೆರವಿಗೆ ಕೇರಳ ಹೈಕೋರ್ಟ್ ಆದೇಶ ಇತ್ಯಾದಿ ಬೆಳವಣಿಗೆಗಳು ನಡೆದಿದ್ದವು. ಆದರೆ ದ.ಕ.ಜಿಲ್ಲೆಯ ಜನತೆಯ ಪ್ರಬಲ ಆಗ್ರಹವನ್ನು ಇಲ್ಲಿನ ಜನಪ್ರತಿನಿಗಳು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿದ್ದರು.ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಗಡಿ ತೆರೆಯುವ ಪ್ರಶ್ನೆಯೇ ಇಲ್ಲ ಸ್ಪಷ್ಟ ನಿಲುವು ತಾಳಿದ್ದರು. ಆದರೆ ಇದೀಗ ಕೊರೋನಾ ಸೋಂಕಿತರಲ್ಲದ ಇತರೆ ರೋಗಿಗಳಿಗೆ ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ಲಭಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ