ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಕೊರೋನಾ ಬಿಕ್ಕಟ್ಟು ಎದುರಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೆಲ ಸಲಹೆಗಳನ್ನ ನೀಡಿದ್ದಾರೆ. ಸಚಿವರ ಸಂಬಳವನ್ನು ಒಂದು ವರ್ಷದವರೆಗೆ ಶೇ. 30ರಷ್ಟು ಕಡಿತ ಮಾಡುವ ಕೇಂದ್ರದ ಕ್ರಮವನ್ನು ಸೋನಿಯಾ ಸ್ವಾಗತಿಸಿದ್ದಾರೆ. ಹಾಗೆಯೇ ಈ ಕ್ರಮವನ್ನು ಇತರ ಬಜೆಟ್ ವೆಚ್ಚಗಳಿಗೂ ವಿಸ್ತರಿಸುವಂತೆ ಅವರು ಸಲಹೆ ನೀಡಿದ್ದಾರೆ.
ಮಾಧ್ಯಮಗಳಿಗೆ ನೀಡುವ ಜಾಹೀರಾತು, ಸಚಿವರ ವಿದೇಶ ಪ್ರವಾಸಗಳು ಇತ್ಯಾದಿ ವೆಚ್ಚಗಳನ್ನ ನಿಲ್ಲಿಸುವಂತೆಯೂ ಅವರು ಶಿಫಾರಸು ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಕೊರೋನಾ ವಿಪತ್ತು ಸಂದರ್ಭವನ್ನು ಎದುರಿಸಲು ವಿಪಕ್ಷಗಳಿಂದ ಸಲಹೆ ಅಪೇಕ್ಷಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷರು ಪ್ರಧಾನಿ ಮೋದಿಗೆ ಪತ್ರ ಬರೆದು ಐದು ಸಲಹೆಗಳನ್ನ ನೀಡಿದ್ದಾರೆ.
ಸೋನಿಯಾ ಗಾಂಧಿ ನೀಡಿದ ಸಲಹೆಗಳು:
1) ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಎರಡು ವರ್ಷ ಯಾವುದೇ ಮಾಧ್ಯಮಗಳಿಗೂ ಜಾಹೀರಾತು ನೀಡಬಾರದು. ಕೊರೋನಾ ಬಗ್ಗೆ ಜನಜಾಗೃತಿ ಮೂಡಿಸುವ ಜಾಹೀರಾತಿಗೆ ಮಾತ್ರ ಅವಕಾಶ ನೀಡಬೇಕು. ಸರ್ಕಾರಿ ಸ್ವಾಮ್ಯ ಸಂಸ್ಥೆ ಹೊರತುಪಡಿಸಿ ಕೇಂದ್ರ ಸರ್ಕಾರವೊಂದೇ ಮಾಧ್ಯಮಗಳ ಜಾಹೀರಾತಿಗೆ ವರ್ಷಕ್ಕೆ 1,250 ಕೋಟಿ ರೂ ವೆಚ್ಚ ಮಾಡುತ್ತದೆ. ಇವನ್ನು ತಪ್ಪಿಸಿದರೆ ಸಾಕಷ್ಟು ಉಣ ಉಳಿತಾಯವಾಗುತ್ತದೆ.
2) 20 ಸಾವಿರ ಕೋಟಿ ರೂ ವೆಚ್ಚದ ಸಂಸದ ಭವನ ನವೀಕರಣ ಯೋಜನೆಯನ್ನು ಸ್ಥಗಿತಗೊಳಿಸಿ. ಇದರ ಅಗತ್ಯ ಇಲ್ಲ. ಈ ಹಣವನ್ನು ವೈದ್ಯಕೀಯ ಸೌಲಭ್ಯಕ್ಕಾಗಿ ಬಳಸಿಕೊಳ್ಳಬಹುದು.
3) ಸಂಬಳ, ಪಿಂಚಣಿ, ಕೇಂದ್ರೀಯ ಯೋಜನೆಗಳನ್ನ ಹೊರತುಪಡಿಸಿ ಉಳಿದ ಬಜೆಟ್ ವೆಚ್ಚದಲ್ಲಿ ಶೇ. 30ರಷ್ಟು ಇಳಿಕೆ ಮಾಡುವ ಕ್ರಮ ಒಳಿತು. ಇದರಿಂದ ವರ್ಷಕ್ಕೆ 2.5 ಲಕ್ಷ ರೂ ಉಳಿತಾಯವಾಗುತ್ತದೆ. ಈ ಹಣವನ್ನು ವಲಸಿಗ ಕಾರ್ಮಿಕರು, ರೈತರು, ಸಣ್ಣ ಉದ್ಯಮ ಮತ್ತು ಅಸಂಘಟಿತ ವಲಯಗಳ ನೆರವಿಗೆ ಬಳಸಬಹುದು.
4) ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರು ಮತ್ತು ಅಧಿಕಾರಿಗಳ ಎಲ್ಲಾ ರೀತಿಯ ವಿದೇಶೀ ಪ್ರವಾಸಗಳಿಗೆ ತಡೆ ನೀಡಬೇಕು. ತುರ್ತು ಭೇಟಿಗೆ ಮಾತ್ರ ಅವಕಾಶ ನೀಡಬಹುದು. ಈ ಹಣವನ್ನು ಕೊರೋನಾ ಬಿಕ್ಕಟ್ಟು ಶಮನಕ್ಕೆ ಬಳಸಬಹುದು.
5) ಪಿಎಂ ಕೇರ್ಸ್ ನಿಧಿಯಲ್ಲಿರುವ ಎಲ್ಲಾ ಹಣವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ವರ್ಗಾಯಿಸಿ. ಇದರಿಂದ ಪಾರದರ್ಶಕವಾಗಿ ಲೆಕ್ಕ ಸಿಗುತ್ತದೆ. ಈ ಹಣವನ್ನು ಬಡವರಿಗೆ ಆಹಾರ ಭದ್ರತೆಗಾಗಿ ಬಳಸಬಹುದು.