ಭಾರತದಲ್ಲಿ 4,421 ಮಂದಿಗೆ ಕೊರೋನಾ ಸೋಂಕು; ಗುಣಮುಖರಾದವರ ಸಂಖ್ಯೆ 325

ನವದೆಹಲಿ: ಭಾರತದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನೊಂದೆಡೆ ಕೊರೋನಾ ವೈರಸ್​ಗೆ ಬಲಿಯಾಗುವವರ ಸಂಖ್ಯೆಯೂ ಏರುತ್ತಿದೆ. ಇದುವರೆಗೆ 114 ಮಂದಿ ಭಾರತದಲ್ಲಿ ಕೊರೋನಾಗೆ ಬಲಿಯಾಗಿದ್ದಾರೆ. ಒಟ್ಟು 4,421 ಜನರಿಗೆ ಕೊರೋನಾ ಸೋಂಕು ಹರಡಿದೆ. ಇದರ ನಡುವೆ ಸಮಾಧಾನಕಾರ ಸಂಗತಿಯೆಂದರೆ ಇದುವರೆಗೆ ಭಾರತದಲ್ಲಿ 325 ಕೊರೋನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ.

ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ಈ ನಡುವೆ 325 ಜನರು ಗುಣಮುಖರಾಗಿರುವುದು ಸಂತಸದ ವಿಷಯೇ ಆಗಿದೆ. ಇವರಲ್ಲಿ ಓರ್ವ ವಲಸೆ ಬಂದ ವ್ಯಕ್ತಿ, 66 ಮಂದಿ ವಿದೇಶಿಯರಿದ್ದಾರೆ. ಇನ್ನುಳಿದವರು ಭಾರತೀಯರು ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇಂದು ರಾಜಸ್ಥಾನದಲ್ಲಿ ಮೂರು ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ತ್ರಿಪುರಾದಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ಸಾವಿನ ಸಂಖ್ಯೆ 45ಕ್ಕೆ ಏರಿಕೆಯಾಗಿದೆ. ಗುಜರಾತ್​ನಲ್ಲಿ 12, ಮಧ್ಯಪ್ರದೇಶದಲ್ಲಿ 9, ತೆಲಂಗಾಣ ಮತ್ತು ದೆಹಲಿಯಲ್ಲಿ ತಲಾ 7 ಸಾವು, ಪಂಜಾಬ್​ನಲ್ಲಿ 6 ಮತ್ತು ತಮಿಳುನಾಡಿನಲ್ಲಿ 5 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

ಇನ್ನು, ಕರ್ನಾಟಕದಲ್ಲಿ 4 ಮಂದಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶಮ ಆಂಧ್ರ ಪ್ರದೇಶ, ರಾಜಸ್ಥಾನದಲ್ಲಿ ತಲಾ ಮೂರು ಮಂದಿ ಕೊರೋನಾ ವೈರಸ್​ನಿಂದ ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳದಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಬಿಹಾರ, ಹಿಮಾಚಲ ಪ್ರದೇಶ ಮತ್ತು ಹರಿಯಾಣದಲ್ಲಿ ತಲಾ ಒಬ್ಬರು ಕೊರೋನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ