ಕೋವಿಡ್-19 ಆರ್ಭಟ: ಜಗತ್ತಿನಾದ್ಯಂತ 75 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ

ವಾಷಿಂಗ್ಟನ್: ಕಣ್ಣಿಗೆ ಕಾಣಿಸದ ಕೋವಿಡ್ 19 ಎಂಬ ವೈರಸ್  ವಿಶ್ವಾದ್ಯಂತ ಎಬ್ಬಿಸಿರುವ ಹಾಲಾಹಲಕ್ಕೆ ಇದುವರೆಗೆ ಬರೋಬ್ಬರಿ 75 ಸಾವಿರ ಜನರು ತಮ್ಮ ಪ್ರಾಣವನ್ನು ತೆತ್ತಿದ್ದಾರೆ. ಸೊಂಕಿತರ ಪ್ರಮಾಣದಲ್ಲೂ ಭಾರಿ ಏರಿಕೆ ಕಂಡುಬಂದಿದ್ದು 13,58, 468 ವೈರಾಣು ಪೀಡಿತರಾಗಿದ್ದಾರೆ.

ಇಷ್ಟಾದರೂ ಈ ಮಹಾಮಾರಿಯ ಆರ್ಭಟ ಇನ್ನೂ ಕಡಿಮೆಯಾದಂತಿಲ್ಲ. ಇಟಲಿ, ಸ್ಪೈನ್ ಗಳಲ್ಲಿ ಮರಣ ಮೃದಂಗ ಬಾರಿಸಿದ ಈ ವೈರಸ್ ಇದೀಗ ವಿಶ್ವದ ದೊಡ್ಡಣ್ಣನೆಂದೆಣಿಸಿಕೊಂಡಿರುವ ಅಮೆರಿಕಾವನ್ನೇ ತನ್ನ ಮುಂದೆ ಮಂಡಿಯೂರುವಂತೆ ಮಾಡಿದೆ.

ಕಳೆದ ಐದು ದಿನಗಳಲ್ಲಿ ಸ್ಪೈನ್ ನಲ್ಲಿ ಇಳಿಮುಖವಾಗಿದ್ದ ಕೋವಿಡ್ 19 ಸಂಬಂಧಿತ ಸಾವಿನ ಪ್ರಕರಣಗಳು ಇಂದು ಸ್ವಲ್ಪಮಟ್ಟಿನ ಏರಿಕೆ ಕಂಡಿರುವುದು ಕಳವಳಕಾರಿಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸ್ಪೇನ್ ನಲ್ಲಿ 743 ಜನರು ಈ ಮಹಾಮಾರಿಗೆ ಜೀವತೆತ್ತಿದ್ದಾರೆ.

ಇನ್ನು ಕೋವಿಡ್ 19 ಅಬ್ಬರಕ್ಕೆ ಬೆದರಿರುವ ಜಪಾನ್ ದೇಶಾದ್ಯಂತ ತುರ್ತು ಸ್ಥಿತಿಯನ್ನು ಘೋಷಿಸಿದೆ. ಸಿಂಗಾಪುರದಲ್ಲಿ ಭಾಗಶಃ ಲಾಕ್ ಡೌನ್ ಘೋಷಣೆಯಾಗಿದೆ. ಇನ್ನುಳಿದ ಹಲವಾರು ದೇಶಗಳು ಈ ವೈರಸ್ ಸಮುದಾಯ ಮಟ್ಟದಲ್ಲಿ ಹರಡದಂತೆ ನಿಯಂತ್ರಿಸಲು ತನ್ನ ಪ್ರಜೆಗಳಿಗೆ ‘ಮನೆಯಲ್ಲೇ ಇರುವಂತೆ’ ಲಾಕ್ ಡೌನ್ ಪರಿಸ್ಥಿತಿಯನ್ನು ಘೋಷಿಸಿವೆ.

ಈ ಕೋವಿಡ್ ಮಹಾಮಾರಿಯ ಕೆಟ್ಟ ಹೊಡೆತಕ್ಕೆ ತತ್ತರಿಸುತ್ತಿರುವ ದೇಶಗಳ ಸಾಲಿನಲ್ಲಿ ಇದೀಗ ಅಮೆರಿಕಾ ಮುಂಚೂಣಿಯಲ್ಲಿದೆ. ಇಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 367,650ಕ್ಕೆ ತಲುಪಿದ್ದು 10,943 ಜನ ಈಗಾಗಲೇ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. 19,810 ಜನರು ಈ ಮಹಾಮಾರಿಯ ಹೊಡೆತಕ್ಕೆ ಸಿಕ್ಕು ಬಳಿಕ ಇದೀಗ ಚೇತರಿಸಿಕೊಂಡಿದ್ದಾರೆ. ಇಲ್ಲಿ ಈಗಾಗಲೇ ಹತ್ತೊಂಬತ್ತು ಲಕ್ಷ ಜನರನ್ನು ಕೋವಿಡ್ 19 ಪರೀಕ್ಷೆಗೊಳಪಡಿಸಲಾಗಿದೆ.

ಇನ್ನು ಸ್ಪೈನ್ ದೇಶದಲ್ಲಿ 140,510 ಕೋವಿಡ್ ಪ್ರಕರಣಗಳು ದಾಖಲಾಗಿದ್ದು 13,798 ಜನ ಸಾವಿಗೀಡಾಗಿದ್ದಾರೆ, ಇಲ್ಲಿ ಇನ್ನೂ 3835 ಹೊಸ ಪ್ರಕರಣಗಳು ದಾಖಲಾಗಿವೆ. 43,208 ಜನ ಈ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇಟಲಿಯಲ್ಲಿ ಈಗಾಗಲೇ 132,547 ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು 16,523 ಜನರ ಜೀವ ಬಲಿಯಾಗಿದೆ. ಆದರೆ ಇದೀಗ ಇಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗುವುದು ನಿಂತಿದ್ದು 93,187 ಆ್ಯಕ್ಟಿವ್ ಪ್ರಕರಣಗಳಲ್ಲಿ 3,898 ಸೋಂಕಿತರ ಸ್ಥಿತಿ ಗಂಭೀರವಾಗಿದ್ದು ಮರಣ ಪ್ರಮಾಣ ಇನ್ನೂ ಹೆಚ್ಚು ಭೀತಿ ಎದುರಾಗಿದೆ.

ಈ ದೇಶಗಳನ್ನು ಹೊರತುಪಡಿಸಿದರೆ ಜರ್ಮನಿ (103,375 ಪ್ರಕರಣಗಳು), ಫ್ರಾನ್ಸ್ (98,010 ಪ್ರಕರಣಗಳು), ಚೀನಾ (81,740 ಪ್ರಕರಣಗಳು), ಇರಾನ್ (62,589 ಪ್ರಕರಣಗಳು) ಹಾಗೂ ಇಂಗ್ಲಂಡ್ (51,608 ಪ್ರಕರಣಗಳು) ದೇಶಗಳು ಕೋವಿಡ್ 19 ವೈರಸ್ ಮಹಾಮಾರಿಗೆ ತತ್ತರಿಸಿರುವ ವಿಶ್ವದ ಇತರೇ ದೇಶಗಳಾಗಿವೆ. ಈ ವೈರಸ್ ಹುಟ್ಟಿಕೊಂಡಿದ್ದ ಚೀನಾದಲ್ಲಿ ಇದೀಗ ಮತ್ತೆ ಹೊಸದಾಗಿ 32 ಸೋಂಕಿತ ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಇನ್ನು, ಭಾರತದಲ್ಲಿ ಇದುವರೆಗೆ 4,858 ಕೋವಿಡ್ 19 ವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು 137 ಜನ ಸಾವಿಗೀಡಾಗಿದ್ದಾರೆ. 382 ಜನ ಮಾತ್ರ ಈ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಭಾರತ ಇದುವರೆಗೂ 140,293 ಕೋವಿಡ್ ಸೋಂಕು ಪರೀಕ್ಷೆಗಳನ್ನು ನಡೆಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ