ಲಖ್ನೋ,ಏ.6- ಮಾರಕ ಸೋಂಕು ಕೊರೊನಾಕ್ಕೆ ತುತ್ತಾಗಿದ್ದರೂ ನಿರ್ಲಕ್ಷವಹಿಸಿ ಸಾರ್ವಜನಿಕ ಸಭೆಸಮಾರಂಭಗಳಲ್ಲಿ ಭಾಗಿಯಾಗಿ ಭಾರೀ ಸುದ್ದಿ ಮಾಡಿದ್ದ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಈಗ ಕೊರೊನಾ ಸೋಂಕಿನಿಂದ ಮುಕ್ತರಾಗಿದಾರೆ.
ಕನ್ನಿಕಾ ಕಪೂರ್ ಅವರ ರಕ್ತದ ಮಾದರಿ ಹಾಗೂ ಗಂಟಲು ದ್ರವವನ್ನು 6ನೇ ಬಾರಿಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಇಂದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.
ಬ್ರಿಟನ್ನಿಂದ ಮರಳಿದ್ದ ಕನ್ನಿಕಾ ಕಪೂರ್ ದೇಶದ ಹಲವು ಭಾಗಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರಲ್ಲದೆ ಹಲವು ಗಣ್ಯರ, ರಾಜಕೀಯ ನಾಯಕರ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ಪ್ರಕರಣ ಇಡೀ ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಸಣ್ಣಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡಿದ್ದರೂ ನಿರ್ಲಕ್ಷಿಸಿ ಹಲವು ಗಣ್ಯರನ್ನು ಭೇಟಿ ಮಾಡುತ್ತಿದ್ದುದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ನಂತರ ಕನಿಕಾ ಅವರನ್ನು ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಐದು ಬಾರಿ ತಪಾಸಣೆ ನಡೆಸಿದಾಗಲೂ ಕೊರೊನಾ ಪಾಟಿಸಿವ್ ಕಂಡುಬಂದಿತ್ತು.
ಸದ್ಯ 6ನೇ ಬಾರಿಯ ತಪಾಸಣೆ ವೇಳೆ ನೆಗೆಟಿವ್ ಬಂದಿರುವುದರಿಂದ ಇಂದು ಕನ್ನಿಕಾ ಕಪೂರ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬಾಲಿವುಡ್ ಖ್ಯಾತ ನಿರ್ದೇಶಕನ ಪುತ್ರರಿಗೂ ಇವರಿಂದ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಕನ್ನಿಕಾ ಜೊತೆ ಸಂಪರ್ಕದಲ್ಲಿದ್ದ ಅಂದಾಜು 260 ಮಂದಿಯನ್ನು ಪತ್ತೆಹಚ್ಚಿ, ಆರೋಗ್ಯ ತಪಾಸಣೆ ನಡೆಸಿ, ಅವರೆಲ್ಲರನ್ನೂ ಹೋಮ್ ಕ್ವಾರಂಟೈನ್ನಲ್ಲಿರುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.