ಪೊಲೀಸರು, ವೈದ್ಯರು, ನರ್ಸ್‍ಗಳು, ಅರೆವೈದ್ಯಕೀಯ ಸಿಬ್ಬಂದಿ ಕಾರ್ಯ ಕ್ಷಮತೆಗೆ ಮೆಚ್ಚುಗೆ

ಬೆಂಗಳೂರು,ಏ.6- ವಿಶ್ವವನ್ನೇ ವ್ಯಾಪಿಸಿ ಮನುಕುಲಕ್ಕೆ ಕಂಟಕವಾಗಿರುವ ಮಹಾಮಾರಿ ಕೊರೊನಾ ಪಿಡುಗು ನಿಯಂತ್ರಿಸುವಲ್ಲಿ ಯೋಧರಂತೆ ಪೊಲೀಸರು, ವೈದ್ಯರು, ನರ್ಸ್‍ಗಳು, ಅರೆವೈದ್ಯಕೀಯ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರೆ ಸೇನಾ ಕಮಾಂಡೊಗಳಂತೆ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಗಲಿರುಳು ನಿರ್ವಹಿಸುತ್ತಿರುವ ಕಾರ್ಯ ಕ್ಷಮತೆ ಮೆಚ್ಚುಗೆಗೆ ಪಾತ್ರವಾಗಿದೆ.

ಬೀದರ್‍ನಿಂದ ಕೋಲಾದವರೆಗಿನ ಎಲ್ಲ ಜಿಲ್ಲಾಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಗಳೊಂದಿಗೆ ಕೊರೊನಾ ನಿಯಂತ್ರಿಸುವಲ್ಲಿ ಖುದ್ದು ಫೀಲ್ಡಿಗಿಳಿದಿದ್ದಾರೆ. ತಮ್ಮ ದಕ್ಷತೆ ಮತ್ತು ಕಾರ್ಯ ಕ್ಷಮತೆಯನ್ನು ಓರಿಗಲ್ಲಿಚ್ಚಲು ಇದೊಂದು ಸುಸಮಯವಾಗಿದೆ.

ರಾಜಧಾನಿ ಬೆಂಗಳೂರು, ಸಾಂಸ್ಕøತಿಕ ನಗರಿ ಮೈಸೂರು, ವಿದ್ಯಾಕಾಶಿ ಧಾರವಾಡ, ಬಿಸಿಲನಗರಿ ರಾಯಚೂರು, ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ತುಮಕೂರು, ಬೆಳಗಾವಿ, ರಾಮನಗರ ಸೇರಿದಂತೆ ಎಲ್ಲಾ 30 ಜಿಲ್ಲೆಗಳಿಗೂ ಕೊರೊನಾ ವ್ಯಾಪಿಸುತ್ತಿದೆ.

ರಾಜ್ಯದಲ್ಲಿ ಈಗಾಗಲೇ 151 ಕೊರೊನಾ ಸೋಂಕಿತರಿದ್ದು, ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಸಾವಿರಾರು ಶಂಕಿತರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ.

ಈ ಕೊರೊನಾ ಸೋಂಕು ವ್ಯಾಪಿಸದಂತೆ ದೇಶಾದ್ಯಂತ ಲಾಕ್‍ಡೌನ್ ವಿಧಿಸಲಾಗಿದ್ದು, ಸೋಂಕಿತರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಆದರೆ ಶಂಕಿತರನ್ನು ಕ್ವಾರಂಟೈನ್‍ನಲ್ಲಿಡಲಾಗಿದ್ದು, ಅವರ ಮೇಲೆ ಹದ್ದಿನ ಕಣ್ಣಿಡಬೇಕು. ಅವರು ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸಬೇಕು, ಇದು ಒಂದೆಡೆಯಾದರೆ ಲಾಕ್‍ಡೌನ್ ಸಂದರ್ಭದಲ್ಲಿ ಸಾರ್ವಜನಿಕರು ಮನೆಯಿಂದ ಹೊರಬರದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆಯೂ ಕೂಡ ಗಮನಹರಿಸಬೇಕು. ಈ ಎಲ್ಲ ಕೆಲಸಗಳನ್ನು ಅತ್ಯಂತ ಚಾಣಾಕ್ಷತನಿಂದ ಹಾಗೂ ಎಚ್ಚರಿಕೆಯಿಂದ ನಮ್ಮ ಎಲ್ಲ ಜಿಲ್ಲಾಧಿಕಾರಿಗಳು ನಿರ್ವಹಿಸುತ್ತಿದ್ದಾರೆ.

ಕೊರೊನಾ ಉಲ್ಭಣವಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಎಲ್ಲಾ ಜಿಲ್ಲೆಗಳಲ್ಲಿ ಕೈಗೊಳ್ಳುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಈ ರೋಗ ಹರಡುವಿಕೆಯ ಪ್ರಮಾಣ ಕಡಿಮೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದಕ್ಕೆ ಕಾರಣ ನಮ್ಮ ಜಿಲ್ಲಾಡಳಿತಗಳು ಕೈಗೊಂಡಿರುವ ಕ್ರಮಗಳು ಕಾರಣ.

ವಿದೇಶದಿಂದ ಬಂದವರಿಂದ ಈ ರೋಗ ಹರಡಿದೆ ಎಂಬ ಸೂಚನೆ ಸಿಕ್ಕುತ್ತಿದ್ದಂತೆ ಬೆಂಗಳೂರು ಜಿಲ್ಲಾಧಿಕಾರಿ ಜಿ.ಎಸ್.ಶಿವಮೂರ್ತಿ ಅವರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡರು.

ದುಬೈನಿಂದ ಬಂದ ಟೆಕ್ಕಿಯ ಪ್ರಯಾಣದ ಮಾಹಿತಿಯನ್ನು ಸಂಗ್ರಹಿಸಿ ಅವರ ಪ್ರಥಮ ಸಂಪರ್ಕ ಮತ್ತು ದ್ವಿತೀಯ ಸಂಪರ್ಕ ಮಾಡಿರುವವರ ಮಾಹಿತಿಯನ್ನು ಪಡೆದು ಅವರನ್ನೆಲ್ಲ ಕ್ವಾರಂಟೈನ್ ಮಾಡಲಾಯಿತು.

ಅದೇ ರೀತಿ ವಿದೇಶದಿಂದ ಬಂದವರ ಹಾಗೂ ಬರುವವರ ಮಾಹಿತಿಯನ್ನೆಲ್ಲ ಸಂಗ್ರಹಿಸಿ ಅವರ ಕೈಗೆ ಸೀಲು ಹಾಕಲಾಯಿತು. ರೋಗ ಲಕ್ಷಣ ಇರುವವರಿಗೆಲ್ಲ ತಪಾಸಣೆಗೊಳಪಡಿಸಿ ಅಗತ್ಯ ಇರುವವರಿಗೆ ಚಿಕಿತ್ಸೆ ಹಾಗೂ ಕ್ವಾರಂಟೈನ್‍ಗೆ ಒಳಪಡಿಸಲಾಯಿತು.

ಅದೇ ರೀತಿ ದೆಹಲಿಯ ಜಮಾತ್ ಮರ್ಕತ್‍ಗೆ ಹೋಗಿ ಬಂದ ತುಮಕೂರಿನ ಮೂಲದವರೊಬ್ಬರಿಗೆ ಈ ಕೊರೊನಾ ಹರಡಿದ್ದ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿನ ಜಿಲ್ಲಾಧಿಕಾರಿ ಎಚ್ಚೆತ್ತುಕೊಂಡು ಅವರ ಸಂಪರ್ಕಕ್ಕೆ ಬಂದಿದ್ದ ಎಲ್ಲರ ಮಾಹಿತಿ ಪಡೆದು ಅವರೆಲ್ಲರನ್ನೂ ಕ್ವಾರಂಟೈನ್ ಮಾಡಿ ರೋಗ ಉಲ್ಬಣಗೊಳ್ಳದಂತೆ ತಡೆದರು.

ಅದೇ ರೀತಿ ನಂಜನಗೂಡಿನಲ್ಲಿ ಇದ್ದ ಜುಬಿಲೆಂಟ್ ಪಾರ್ಕ್ ಕಾರ್ಖಾನೆಯ ನೌಕರನೊಬ್ಬನಿಗೆ ಈ ಸೋಂಕು ಕಾಣಿಸಿಕೊಂಡ ಕೂಡಲೇ ಅಲರ್ಟ್ ಆದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಇವರ ಸಂಪರ್ಕಕ್ಕೆ ಬಂದವ ಮಾಹಿತಿ ಪಡೆದು ಅವರನ್ನೆಲ್ಲ ಕ್ವಾರಂಟೈನ್ ಮಾಡಿ ರೋಗ ಹರಡದಂತೆ ಎಚ್ಚರಿಕೆ ವಹಿಸಿದರು.

ಅಲ್ಲದೆ ದೆಹಲಿಯಲ್ಲಿ ನಡೆದ ಜಮಾತ್ ಧರ್ಮ ಸಮಾವೇಶಕ್ಕೆ ಹೋಗಿ ಬಂದವರಿಗೆ ತಗುಲಿದ್ದ ಕೊರೊನಾ ಸೋಂಕಿನ ಸಂಪರ್ಕಿತರನ್ನೆಲ್ಲ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೊಳಪಡಿಸಿದರು.

ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಈ ರೋಗ ಪತ್ತೆಯಾದಾಗ ಅಲ್ಲಿನ ಜಿಲ್ಲಾಧಿಕಾರಿ ಲತಾ ಅವರು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ರೋಗ ಪಸರಿಸದಂತೆ ನಿಗಾವಹಿಸಿದರು.

ಇಡೀ ದೇಶದಲ್ಲಿ ಈ ರೋಗದಿಂದ ಸಾವನ್ನಪ್ಪಿದ ಮೊದಲ ಪ್ರಕರಣ ಕಲಬುರಗಿಯಲ್ಲಿ ನಡೆದಿದ್ದು, ದುಬೈನಿಂದ ಹಿಂದಿರುಗಿದ್ದ ವೃದ್ಧರೊಬ್ಬರಿಗೆ ಕೊರೊನಾ ಸೋಂಕು ತಗುಲಿ ಸಾವನ್ನಪ್ಪಿದ್ದಾಗ ಜಿಲ್ಲಾಧಿಕಾರಿ ಶರತ್ ಅವರು ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಿಷ್ಟಾಚಾರದಂತೆ ಅಂತ್ಯ ಸಂಸ್ಕಾರ ನೆರವೇರಿಸಿ ಜಿಲ್ಲೆಯಲ್ಲಿ ಈ ಸೋಂಕು ಹರಡದಂತೆ ಎಚ್ಚರ ವಹಿಸಿದರು. ಈವರೆಗೆ ಜಿಲ್ಲೆಯಲ್ಲಿ ಕೇವಲ 5 ಪ್ರಕರಣಗಳು ಮಾತ್ರ ವರದಿಯಾಗಿವೆ.

ಅದರಂತೆ ಧಾರವಾಡದ ಜಿಲ್ಲಾಧಿಕಾರಿ ದೀಪ ಚೋಳನ್ ಅವರು ಜಿಲ್ಲೆಯಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿ ತಪಾಸಣೆ ನಡೆಸಿ ರೋಗ ಲಕ್ಷಣವುಳ್ಳವರನ್ನು ಕ್ವಾರಂಟೈನ್ ಮಾಡಿ ಕಟ್ಟುನಿಟ್ಟಾಗಿ ಲಾಕ್‍ಡೌನ್ ನಿಯಮಗಳನ್ನು ಜಾರಿಗೊಳಿಸಿದರು.

ಬೆಳಗಾವಿ ಜಿಲ್ಲೆಯಲ್ಲೂ ಕೂಡ ಕೊರೊನಾ ಪ್ರಕರಣಗಳು ಕಂಡುಬಂದವು. ವಿದೇಶದಿಂದ ಬಂದವರಿಂದ ಹಾಗೂ ದೆಹಲಿ ಜಮಾತ್‍ನಲ್ಲಿ ಭಾಗವಹಿಸಿದವರಿಂದ ಕೊರೊನಾ ಸೋಂಕು ಕಂಡುಬಂತು. ಇದನ್ನು ನಿಯಂತ್ರಿಸಲು ಇಲ್ಲಿನ ಜಿಲ್ಲಾಧಿಕಾರಿ ಸೋಂಕಿತ ವ್ಯಕ್ತಿಗಳ ಸಂಪರ್ಕದಲ್ಲಿದ್ದವರನ್ನೆಲ್ಲ ಜಾಲಾಡಿ ಎಲ್ಲರನ್ನು ಕ್ವಾರಂಟೈನ್ ಮಾಡುವಲ್ಲಿ ಮತ್ತು ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾದ ಪರಿಣಾಮ ಇಲ್ಲಿನ ಜಿಲ್ಲಾಧಿಕಾರಿ ಸಿಂಧು ಡಿ.ರೂಪ ಅವರು ಲಾಕ್‍ಡೌನ್‍ನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರು. ಯಾರೂ ಮನೆಯಿಂದ ಹೊರಬರದಂತೆ ಕಡ್ಡಾಯ ನಿಯಮಗಳನ್ನು ರೂಪಿಸಿದರು. ಇದರ ಪರಿಣಾಮ ಕೊರೊನಾ ಸಾವುನೋವಿನ ಸಂಖ್ಯೆ ಕಡಿಮೆಯಾಯಿತು.

ರಾಮನಗರದಲ್ಲೂ ಕೂಡ ಜಿಲ್ಲಾಧಿಕಾರಿ ಅರ್ಚನಾ ಅವರು ಸಾಕಷ್ಟು ಕಟ್ಟುನಿಟ್ಟಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು. ಜನರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೊರೊನಾ ನಿಯಂತ್ರಿಸಲು ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಬಗ್ಗೆ ಜನರಲ್ಲಿ ಮನವರಿಕೆ ಮಾಡುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಣ್ಣು, ತರಕಾರಿ, ಹೂವು, ದಿನಸಿ ಪದಾರ್ಥಗಳ ಸಾಗಾಣಿಕೆಗೆ ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರ ಅವರು ಅನುವು ಮಾಡಿಕೊಟ್ಟಿದ್ದರು.

ಈ ಸಂದರ್ಭವನ್ನು ಕೆಲವು ಅಧಿಕಾರಿಗಳು ದುರುಪಯೋಗಪಡಿಸಿಕೊಂಡು ಸುಲಿಗೆಗಿಳಿದಿದ್ದರು. ರೈತರು ಜಿಲ್ಲಾಧಿಕಾರಿಗಳಿಗೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣನವರ್ ಅವರು ಚಾಲಕರ ವೇಷಧರಿಸಿ ಲಾರಿ ಚಾಲಿಸಿಕೊಂಡು ಬಂದು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದರು.

ಇದೇ ರೀತಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವೆಡೆ ಲಾಠಿ ಹಿಡಿದು ತಾವೇ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ರಾಜ್ಯದ 9 ಗಡಿಭಾಗಗಳನ್ನು ಬಂದ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದೆ. ವಲಸೆ ಬಂದವರು ಕಾರ್ಮಿಕರನ್ನು ತಡೆಹಿಡಿಯಲಾಗಿದೆ.

ಅವರೆಲ್ಲರ ಹಸಿವು ನೀಗಿಸುವಲ್ಲಿ ಅವರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಆಯಾಯಾ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ