ಏಪ್ರಿಲ್​ 5ರ ರಾತ್ರಿ 9 ಗಂಟೆಗೆ ಇಡೀ ವಿಶ್ವಕ್ಕೆ ಬೆಳಕಿನ ಶಕ್ತಿ ತೋರಿಸಬೇಕು; ಪ್ರಧಾನಿ ಮೋದಿ

ಹೊಸದಿಲ್ಲಿ: ದೇಶದಾದ್ಯಂತ ಕೊರೋನಾ ವೈರಸ್ ಅಟ್ಟಹಾಸ ಮುಂದವರೆದಿದ್ದು, ಸೋಂಕಿತರ ಸಂಖ್ಯೆ ಮತ್ತು ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಏತನ್ಮಧ್ಯೆ ಕೊರೋನಾ ವೈರಸ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ವಿಡಿಯೋ ಸಂದೇಶವನ್ನು ಇಂದು ಬೆಳಗ್ಗೆ 9 ಗಂಟೆಗೆ ಬಿಡುಗಡೆ ಮಾಡಿದ್ದಾರೆ.

ಇಂದಿಗೆ ಲಾಕ್​ಡೌನ್​ ಜಾರಿಯಾಗಿ 9 ದಿನಗಳು ಕಳೆದಿವೆ. ಮಾರ್ಚ್​ 22ರಂದು ಜನತಾ ಕರ್ಫ್ಯೂ ಜಾರಿಯಾಗಿದೆ. ಭಾರತ ಎಲ್ಲಾ ದೇಶಗಳಿಗೆ ಮಾದರಿಯಾಗಿದೆ. ಭಾರತ ಯಾವುದರ ವಿರುದ್ಧವಾದರೂ ಸಹ ಹೋರಾಡಲು ಸಿದ್ದವಾಗಿದೆ. ಲಾಕ್​ ಡೌನ್​ನ್ನು ಇಡೀ ವಿಶ್ವವೇ ಅನುಸರಿಸುವಂತಾಗಿದೆ. ಇಲ್ಲಿ ಯಾರೂ ಏಕಾಂಗಿ ಅಲ್ಲ ಎಂದು ಹೇಳಿದರು.

ಮುಂದುವರೆದ ಅವರು, ಏಪ್ರಿಲ್​ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ನಿಮ್ಮ ಅಮೂಲ್ಯ ಸಮಯ ನನಗೆ ಬೇಕು ಎಂದು ಪ್ರಧಾನಿ ಮೋದಿ 130 ಕೋಟಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ. ಭಾನುವಾರ ರಾತ್ರಿ 9 ಗಂಟೆಗೆ ಪ್ರತಿಯೊಬ್ಬ ಭಾರತೀಯ ಕೂಡ ಮನೆಯ ಲೈಟ್​ ಆರಿಸಿ, ಮೊಬೈಲ್​ ಟಾರ್ಚ್​ ಅಥವಾ ಮೇಣದ ಬತ್ತಿ ಹಿಡಿಯಬೇಕು. ಆ ಮೂಲಕ ಇಡೀ ವಿಶ್ವಕ್ಕೆ ಭಾರತದ ಬೆಳಕನ್ನು ತೋರಿಸಬೇಕು ಎಂದು ಮೋದಿ ಭಾರತೀಯರಲ್ಲಿ ಮನವಿ ಮಾಡಿದ್ದಾರೆ.

ಮನೆಯ ನಾಲ್ಕು ಕಡೆ ದೀಪ ಹಚ್ಚಿ, ದೀಪ ಹಚ್ಚುವುದರಿಂದ ನಮ್ಮ ಶಕ್ತಿಯ ಅನಾವರಣವಾಗುತ್ತದೆ. ಮನೆಯ ಬಾಲ್ಕನಿಯಲ್ಲಿ ನಿಂತು ದೀಪ, ಮೇಣದಬತ್ತಿ, ಟಾರ್ಚ್​, ಮೊಬೈಲ್ ಫ್ಲಾಶ್ ಹಿಡಿದು ಭಾರತ  ಮಾತೆಯನ್ನು ನೆನೆಯಿರಿ. ಯಾರೂ ಸಹ ರಸ್ತೆಗಿಳಿಯಬೇಡಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

ಪ್ರಧಾನಿ ಮೋದಿ ಕಳೆದ ಮಾರ್ಚ್​ 22ರ ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಅಂದು ಸಂಜೆ 5 ಗಂಟೆಗೆ ಭಾರತೀಯರು ಮನೆಯ ಬಾಲ್ಕನಿಯಲ್ಲಿ ನಿಂತು ಗಂಟೆ, ಶಂಖ, ಜಾಗಟೆ ಬಾರಿಸುವ ಮೂಲಕ ಕೊರೋನಾ ವಿರುದ್ಧ  ಹೋರಾಡುತ್ತಿರುವ ವೈದ್ಯರಿಗೆ ಧನ್ಯವಾದ ತಿಳಿಸಬೇಕು ಎಂದು ಮೋದಿ ಮನವಿ ಮಾಡಿದ್ದರು.

ಇಂದು ದೇಶದ ಜನರಿಗೆ ವಿಡಿಯೋ ಸಂದೇಶ ರವಾನೆ ಮಾಡುವ ಮೂಲಕ ಏಪ್ರಿಲ್ 5ರ ಭಾನುವಾರ ರಾತ್ರಿ 9 ಗಂಟೆಗೆ 130 ಕೋಟಿ ಭಾರತೀಯರ ಅಮೂಲ್ಯವಾದ 9 ನಿಮಿಷಗಳನ್ನು ನನಗೆ ನೀಡಿ ಎಂದು ಮೋದಿ ಕೇಳಿಕೊಂಡಿದ್ದಾರೆ. ಅಂದು ದೇಶದೆಲ್ಲೆಡೆ ದೀಪಾವಳಿಯ ವಾತಾವರಣ ಮನೆ ಮಾಡಿರುತ್ತದೆ.

ಮನೆಯ ಎಲ್ಲಾ ಲೈಟ್​ಗಳನ್ನು ಆರಿಸಿ, ದೀಪ, ಮೇಣದ ಬತ್ತಿ ಅಥವಾ ಮೊಬೈಲ್ ಟಾರ್ಚ್​ ಆನ್​ ಮಾಡಿ. ಇಡೀ ವಿಶ್ವಕ್ಕೆ ಸಂದೇಶ ಕೊಡೋಣ.  ಮಹಾಮಾರಿ ಕೊರೋನಾ ವಿರುದ್ಧ ಯುದ್ಧ ಸಾರೋಣ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ