ಕೊರೋನಾ ದಾಳಿಗೆ ತತ್ತರಿಸಿದ ಅಮೆರಿಕ; 24 ಗಂಟೆಯಲ್ಲಿ 1169 ಜನ ಸಾವು

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಅಮೆರಿಕ ಕೊರೋನಾ ವೈರಸ್​​ ದಾಳಿಗೆ ತತ್ತರಿಸಿ ಹೋಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 1169 ಮಂದಿ ಕೊರೋನಾ ವೈರಸ್​​ಗೆ ಬಲಿಯಾಗಿದ್ದಾರೆ. ಜಾನ್ಸ್​ ಹಾಪ್ಕಿನ್ಸ್​ ವಿಶ್ವವಿದ್ಯಾಲಯದ ದತ್ತಾಂಶ ಹೇಳಿದೆ. ಕೊರೋನಾ ವೈರಸ್​ ಹರಡಲು ಪ್ರಾರಂಭವಾದಾಗಿನಿಂದ ಒಂದು ದಿನದಲ್ಲಿ ದಾಖಲಾದ ಅತಿಹೆಚ್ಚು ಸಾವಿನ ಸಂಖ್ಯೆ ಇದಾಗಿದೆ ಎಂದು ತಿಳಿದು ಬಂದಿದೆ.

ಅಮೆರಿಕದಲ್ಲಿ ಈವರೆಗೆ 6,075 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೇ ಅತಿಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡಿರುವುದು ಸಹ ಅಮೆರಿಕದಲ್ಲಿಯೇ. ಈವರೆಗೆ ಸುಮಾರು 2,26,374 ಜನರಿಗೆ ಕೊರೋನಾ ವೈರಸ್​ ತಗುಲಿದೆ.

ಇನ್ನು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೋನಾ ತಗುಲಿದೆ ಎಂಬ ವದಂತಿಗಳು ಕೇಳಿ ಬಂದಿದ್ದವು. ವೈದ್ಯಕೀಯ ಪರೀಕ್ಷೆ ಬಳಿಕ ಅಧ್ಯಕ್ಷರಿಗೆ ಸೋಂಕು ಹರಡಿಲ್ಲ ಎಂಬುದನ್ನು ಶ್ವೇತ ಭವನ ದೃಡಪಡಿಸಿತ್ತು. ಈಗ ಎರಡನೇ ಬಾರಿಗೆ ಟ್ರಂಪ್​​ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದು, ಈ ಬಾರಿಯೂ ನೆಗೆಟಿವ್ ಬಂದಿದೆ.

ಡೊನಾಲ್ಡ್​ ಟ್ರಂಪ್ ಅವರಿಗೆ ಯಾವುದೇ ಅನಾರೋಗ್ಯದ ಲಕ್ಷಣಗಳಿಲ್ಲ. ಅವರು ಆರೋಗ್ಯವಾಗಿದ್ದಾರೆ ಎಂದು ಶ್ವೇತ ಭವನದ ವೈದ್ಯರೊಬ್ಬರು ತಿಳಿಸಿದ್ದಾರೆ. ಟ್ರಂಪ್​ ಅವರ ವೈದ್ಯರಾದ ಸೀನ್​ ಕೋನ್ಲೆ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಎರಡನೇ ಬಾರಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಅಮೆರಿಕ ಅಧ್ಯಕ್ಷರಿಗೆ ಕೊರೋನಾ ಹರಡಿಲ್ಲ ಎಂಬುದು ಖಚಿತವಾಗಿದೆ.

ಟ್ರಂಪ್ ಅವರಿಗೆ ರ್ಯಾಪಿಡ್​ ಪಾಯಿಂಟ್ ಆಫ್ ಕೇರ್​​​​ ಟೆಸ್ಟ್​ನಿಂದ ಪರೀಕ್ಷೆ ನಡೆಸಲಾಗಿದ್ದು, ಕೇವಲ 15 ನಿಮಿಷದಲ್ಲಿ ವರದಿ ಬಂದಿದೆ. ಕೋವಿಡ್​-19 ನೆಗೆಟಿವ್ ಬಂದಿದೆ ಎಂದು ಕೋನ್ಲೆ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ