ಮೈಸೂರಿನ ಕೆ.ಆರ್.ಆಸ್ಪತ್ರೆಯ ಸಿಬ್ಬಂದಿಗೆ ಗ್ರಾಮಸ್ಥರಿಂದ ಬಹಿಷ್ಕಾರ : ಕೊರೋನಾ ವೈರಸ್ ಹೊತ್ತು ತರುವ ಆತಂಕ: ಗ್ರಾಮಕ್ಕೆ ಬರದಂತೆ ತಡೆ

ಮೈಸೂರು : ಕೊರೋನಾ ವೈರಸ್ ಸೋಂಕು ಹರಡುವ ಭಯದ ಹಿನ್ನೆಲೆಯಲ್ಲಿ ಇಡೀ ಮೈಸೂರು ಭಾಗಕ್ಕೆ ದೊಡ್ಡಾಸ್ಪತ್ರೆ ಎಂದು ಹೆಸರಾಗಿರುವ ಮೈಸೂರಿನ ಕೆ.ಆರ್.ಆಸ್ಪತ್ರೆಯ ಸಿಬ್ಬಂದಿಗೆ ಗ್ರಾಮಸ್ಥರು ಇದೀಗ ಬಹಿಷ್ಕಾರ ಹಾಕಿದ್ದಾರೆ. ನಮ್ಮ ಗ್ರಾಮಕ್ಕೆ ನೀವು ಬರಬೇಡಿ, ಬರುವುದಾದರೆ, ಗ್ರಾಮದಲ್ಲಿಯೇ ಇರಿ, ಆಸ್ಪತ್ರೆಗೆ ಹೋಗಬೇಡಿ ಎಂದು ಷರತ್ತಿನ ತಾಕೀತು ಮಾಡುತ್ತಿದ್ದಾರೆ. ಇದರಿಂದಾಗಿ ಕೆ.ಆರ್.ಆಸ್ಪತ್ರೆಯ ಸಿಬ್ಬಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ, ಮತ್ತೊಂದೆಡೆ ಆಸ್ಪತ್ರೆಗೆ ಬರುತ್ತಿದ್ದ ಸಿಬ್ಬಂದಿಯ ಪ್ರಮಾಣದಲ್ಲಿ ಶೇ 50ರಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೆ, ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಕೆ.ಆರ್.ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲವು ವೈದ್ಯರು, ನರ್ಸ್‍ಗಳು ಹಾಗೂ ಡಿಗ್ರೂಪ್ ನೌಕರರು ಸಮೀಪದ ತಮ್ಮ ಗ್ರಾಮಗಳಿಂದ ದಿನ ನಿತ್ಯ ಆಸ್ಪತ್ರೆಗೆ ಆಗಮಿಸಿ, ಕೆಲಸ ಮುಗಿದ ಬಳಿಕ ಗ್ರಾಮಗಳಿಗೆ ಬಸ್, ಆಟೋಗಳ ಮೂಲಕ ತೆರಳುತ್ತಿದ್ದರು. ಆದರೆ ಮಹಾಮಾರಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಯಾರೂ ಕೂಡ ಮನೆಯಿಂದ ಹೊರಬರಬಾರದು ಎಂದು ಸರ್ಕಾರ ಹಾಗೂ ಜಿಲ್ಲಾಡಳಿತ ನೀಡುತ್ತಿರುವ ಕಟ್ಟು ನಿಟ್ಟಿನ ಎಚ್ಚರಿಕೆಯ ಗಂಭೀರತೆಯನ್ನು ಅರಿತಿರುವ ಗ್ರಾಮಗಳ ಗ್ರಾಮಸ್ಥರು, ಇದೀಗ ತಮ್ಮ ಗ್ರಾಮಗಳನ್ನು ಕೊರೋನಾ ವೈರಸ್ ಹರಡುವಿಕೆಯಿಂದ ರಕ್ಷಿಸಿಕೊಳ್ಳಲೆಂದು ಬಂದ್ ಮಾಡಿಕೊಂಡಿದ್ದಾರೆ. ಗ್ರಾಮದಿಂದ ಹೊರಕ್ಕೆ ಹೋಗುವುದಕ್ಕೆ ಯಾರನ್ನೂ ಬಿಡುತ್ತಿಲ್ಲ, ಒಂದು ವೇಳೆ ಹೊರಕ್ಕೆ ಹೋದರೆ, ಅಂತಹವರನ್ನು ಗ್ರಾಮದೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಇದೇ ನಿಯಮವನ್ನು ಈಗ ಮೈಸೂರಿನ ಕೆ.ಆರ್.ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗೂ ಜಾರಿಗೊಳಿಸಿದ್ದಾರೆ. ನೀವು ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿ, ಅಲ್ಲಿಂದ ಕೊರೋನಾ ವೈರಸ್ ರೋಗವನ್ನು ನಮ್ಮ ಗ್ರಾಮಕ್ಕೆ ತರುವುದು ಬೇಡಾ, ಬರುವುದಾದರೆ ಕೊರೋನಾ ವೈರಸ್ ಹಾವಳಿ ಸಂಪೂರ್ಣವಾಗಿ ನಿಲ್ಲುವ ತನಕ ಗ್ರಾಮದಲ್ಲಿಯೇ ನೀವು ಇರಬೇಕು, ಗ್ರಾಮ ಬಿಟ್ಟು ಹೊರಹೋಗುವಂತಿಲ್ಲ, ನೀವು ಕೆ.ಆರ್.ಆಸ್ಪತ್ರೆಗೆ ಕೆಲಸಕ್ಕೆ ಹೋಗುವಂತಿಲ್ಲ, ರಜೆ ಹಾಕಿ ಬನ್ನಿ, ಇದು ಸಾಧ್ಯವಿಲ್ಲ ಎನ್ನುವುದಾದರೆ, ನೀವು ಮೈಸೂರಿನಲ್ಲಿಯೇ ಎಲ್ಲಾದರೂ ಇರಿ, ನಮ್ಮ ಗ್ರಾಮಕ್ಕೆ ಬರಬೇಡಿ ಎಂದು ತಾಕೀತು ಮಾಡುತ್ತಿದ್ದಾರೆ.

ಮಾತನಾಡಿಸುವುದಿಲ್ಲ, ಬಾಗಿಲು ಹಾಕಿಕೊಳ್ಳುತ್ತಾರೆ: ಈ ಮೊದಲು ಕೆ.ಆರ್.ಆಸ್ಪತ್ರೆಯಲ್ಲಿ ಕೊರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿಲ್ಲ, ಆದರೆ ಈಗ ಅಲ್ಲಿ ಇಲ್ಲ, ಜಿಲ್ಲಾಸ್ಪತ್ರೆಗೆ ಕೊರೋನಾ ಸೋಂಕಿತರನ್ನು ಶಿಫ್ಟ್ ಮಾಡಲಾಗಿದೆ. ಹಾಗಾಗಿ ನಮ್ಮ ಆಸ್ಪತ್ರೆಯಲ್ಲಿ ಬೇರೆ, ಬೇರೆ ಕಾಯಿಲೆ, ರೋಗ ಇದ್ದವರಿಗೆ ಮಾತ್ರ ಚಿಕಿತ್ಸೆ ನೀಡುತ್ತಿದ್ದೇವೆ, ಹಾಗಾಗಿ ನಮ್ಮಿಂದ ನಿಮ್ಮ ಗ್ರಾಮಕ್ಕೆ ಕೊರೋನಾ ವೈರಸ್ ಹರಡುವುದಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಎಷ್ಟೇ ಹೇಳಿದರೂ, ಮನವೊಲೈಸುವ ಪ್ರಯತ್ನ ನಡೆಸಿದರೂ, ಗ್ರಾಮಸ್ಥರು ಮಾತ್ರ ಸುತಾರಾಂ ಒಪ್ಪುತ್ತಿಲ್ಲ. ಆಸ್ಪತ್ರೆಯಲ್ಲಿ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ವಾಪಾಸ್ ಹೋದರೆ, ತಡೆಯುತ್ತಾರೆ, ಹಾಗೂ ಹೀಗೂ ಮನೆಗೆ ಹೋದರೆ, ಅಕ್ಕ ಪಕ್ಕದ ಮನೆಯವರನ್ನು ಮಾತನಾಡಿಸಲು ಯತ್ನಿಸಿದರೆ, ಅವರೆಲ್ಲಾ ನಮ್ಮನ್ನು ನೋಡಿದ ಕೂಡಲೇ ತಮ್ಮ ಮನೆ ಬಾಗಿಲನ್ನು ಹಾಕಿಕೊಳ್ಳುತ್ತಾರೆ, ತಮ್ಮ ಮಕ್ಕಳನ್ನೂ ಅವರು ತಮ್ಮ ಮಕ್ಕಳೊಂದಿಗೆ ಆಟವಾಡಲು ಬಿಟ್ಟುಕೊಳ್ಳುತ್ತಿಲ್ಲ, ಗ್ರಾಮದಲ್ಲಿ ಇರಲು ಆಗುತ್ತಿಲ್ಲ, ಆಸ್ಪತ್ರೆಯ ಕೆಲಸಕ್ಕೆ ಹೋಗದಿರಲೂ ಆಗುತ್ತಿಲ್ಲ, ತೀವ್ರ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಕೆ.ಆರ್.ಆಸ್ಪತ್ರೆಯ ಸಿಬ್ಬಂದಿ ತಮ್ಮ ಅಳಲು, ಸಂಕಟವನ್ನು ತೋಡಿಕೊಂಡರು.

ಶೇ 50ರಷ್ಟು ಸಿಬ್ಬಂದಿ ಗೈರು: ಗ್ರಾಮಸ್ಥರ ಬಹಿಷ್ಕಾರ, ಸಂಚಾರಕ್ಕೆ ವಾಹನದ ಸೌಲಭ್ಯಗಳಿಲ್ಲದ ಕಾರಣ ಕೆ.ಆರ್.ಆಸ್ಪತ್ರೆಗೆ ಶೇ 50ರಷ್ಟು ಸಿಬ್ಬಂದಿ ಗೈರಾಗುತ್ತಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ, ಮುಂತಾದ ಕೆಲಸಗಳಿಗೆ ಸಿಬ್ಬಂದಿಯ ಕೊರತೆ ತೀವ್ರವಾಗಿದೆ.

ಆಸ್ಪತ್ರೆಯಲ್ಲಿಯೇ ಸಿಬ್ಬಂದಿಗೆ ಉಳಿಯುವ ವ್ಯವಸ್ಥೆಗೆ ಚಿಂತನೆ: ಕೆ.ಆರ್. ಆಸ್ಪತ್ರೆಯ ಸಿಬ್ಬಂದಿಗೆ ಗ್ರಾಮಸ್ಥರು ಬಹಿಷ್ಕಾರ ಹಾಕಿರುವ ವಿಚಾರ ತಿಳಿಯುತ್ತಿದ್ದಂತೆ , ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು, ಸಿಬ್ಬಂದಿ ಸಮಸ್ಯೆಯನ್ನು ಆಲಿಸಿದ್ದು, ಇದೀಗ ಅವರಿಗೆಲ್ಲಾ ಆಸ್ಪತ್ರೆಯಲ್ಲಿಯೇ ಸೂಕ್ತ ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ. ಕೆಲವು ಸ್ವಯಂ ಸೇವಾ ಸಂಸ್ಥೆಗಳು ಸಿಬ್ಬಂದಿಗೆ ಊಟ, ತಿಂಡಿ ಪೂರೈಸಲು ಮುಂದಾಗಿರುವ ಹಿನ್ನಲೆಯಲ್ಲಿ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ