ಕಳೆದ 24 ಗಂಟೆಗಳಲ್ಲಿ ಕೊರೋನಾಗೆ 4 ಸಾವು, 92 ಹೊಸ ಪಾಸಿಟಿವ್ ಕೇಸ್ ಪತ್ತೆ; ಕೇಂದ್ರ ಆರೋಗ್ಯ ಇಲಾಖೆ

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1071ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಇಂದು ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ, ಕಳೆದ 24 ಗಂಟೆಗಳಲ್ಲಿ ಹೊಸ 92 ಕೊರೋನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

ಇನ್ನು, ಕೊರೊನಾ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಸೋಂಕು ಹರಡುತ್ತಿರುವ ಬಗ್ಗೆ ಆತಂಕಪಡಬೇಕಾಗಿಲ್ಲ. ಜನ ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದ 13 ಮಂದಿ ವಿರುದ್ಧ ಜಮ್ಮು ಕಾಶ್ಮೀರದಲ್ಲಿ ದೂರು ದಾಖಲಾಗಿದೆ. ಜಮ್ಮು ಕಾಶ್ಮೀರದ ಬಂಡಿಪೊರ ಜಿಲ್ಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದರು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ.

ಹೀಗೆ ಮುಂದುವರೆದ ಅವರು, ದೇಶಾದ್ಯಂತ 600 ಐಎಎಸ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಕೊರೋನಾ ವಿರುದ್ಧ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಪಡೆಯಲಾಗುತ್ತಿದೆ. ಈ ಮಾಹಿತಿ ಆಧರಿಸಿ ಕೇಂದ್ರ ಸರ್ಕಾರ ಮುಂದಿನ ನಡೆ ಇಡುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಈಗಾಗಲೇ ಕೊರೋನಾ ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ನಿನ್ನೆಯವರೆಗೆ 1,071 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇಂದು ಪಶ್ಚಿಮ ಬಂಗಾಳದಲ್ಲಿ ಮತ್ತೋರ್ವ ಮಹಿಳೆ ಸಾವನ್ನಪ್ಪುವ ಮೂಲಕ ದೇಶದಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 83 ಮುಟ್ಟಿದೆ. ಮಹಾರಾಷ್ಟ್ರದಲ್ಲಿ ಈ ಸಂಖ್ಯೆ 200ರ ಗಡಿ ದಾಟಿದೆ. ಅಮೆರಿಕದಲ್ಲಿ ನಿನ್ನೆ ಒಂದೇ ದಿನ 16 ಸಾವಿರ ಪ್ರಕರಣ ದಾಖಲಾಗಿದ್ದು, ಈ ಮೂಲಕ ಕೊರೋನಾ ಪೀಡಿತರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ ಆಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ 23 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ. ದೇಶಾದ್ಯಂತ ಕೊರೋನಾ ವೈರಸ್ ಸೋಂಕು ತಗುಲಿದವರ ಸಂಖ್ಯೆ 1,071ಕ್ಕೆ ಮುಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ