ಗಂಡಾಂತರದ ಎಚ್ಚರಿಕೆ ಗಂಟೆ ಬಾರಿಸುತ್ತಿದೆಯಾ ನಂಜನಗೂಡು ಕಾರ್ಖಾನೆಯ ಕೊರೋನಾ ವೈರಸ್ ಸೋಂಕಿತರ ಪ್ರಕರಣ

ಮೈಸೂರು: ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯ ಐದು ಮಂದಿಗೆ ಕೊರೋನಾ ವೈರಸ್ ಸೋಂಕು ಪತ್ತೆಯಾಗಿರುವ ಪ್ರಕರಣ ಇದೀಗ ಗಂಡಾಂತರದ ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತಿದೆ. ಸೋಂಕು ಪತ್ತೆಯಾದ ಮೊದಲ ವ್ಯಕ್ತಿಯ ಟ್ರಾವಲ್ ಹಿಸ್ಟರಿ ಇನ್ನೂ ಖಚಿತವಾಗಿ ಸಿಗದೆ ಇರುವುದು ಹಾಗೂ ಇದೇ ಕಾರ್ಖಾನೆ ಸೋಂಕಿತ 3ನೇ ವ್ಯಕ್ತಿ ಹಾಗೂ ಆತನ ಕುಟುಂಬ ತಮ್ಮ ಪ್ರಯಾಣದ ಬಗ್ಗೆ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ನೀಡದೆ, ಉಡಾಫೆ ಹಾಗೂ ಬೇಜವಾಬ್ದಾರಿತದ ಹಾರಿಕೆಯ ಉತ್ತರ ನೀಡುತ್ತಿರುವುದು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಕಂಗೆಡಿಸಿದೆ. ಯಾಕೇಂದರೆ ಕಾರ್ಖಾನೆಯ ಐವರು ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಸಿಬ್ಬಂದಿಯಲ್ಲಿ ಕೆಲವರು ಹಾಸನ, ಮಂಡ್ಯ ಜಿಲ್ಲೆಗಳಿಗೂ ಹೋಗಿ ಬಂದಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಮಂಡ್ಯ ಜಿಲ್ಲೆಯಲ್ಲಿ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ 30 ಮಂದಿಯನ್ನು ಪತ್ತೆ ಹಚ್ಚಿ, ಇದೀಗ ಅವರನ್ನು ಮೈಸೂರಿನಲ್ಲಿ ಹೋಂ ಕ್ವಾರಂಟೈನ್‍ನಲ್ಲಿಡಲಾಗುತ್ತಿದೆ. ಹಾಸನ ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಮೈಸೂರಿನ ಜ್ಯುಬಿಲಿಯೆಂಟ್ ಕಾರ್ಖಾನೆಯ ನೌಕರರು ಬಂದು ಹೋಗಿರುವ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಲ್ಲದೆ ಅವರ ಸಂಪರ್ಕಕ್ಕೆ ಯಾರ್ಯಾರು ಬಂದಿದ್ದರು ಎಂಬುದನ್ನು ಪತ್ತೆ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ್ದಾರೆ. ಆದರೆ ಸದ್ಯಕ್ಕೆ ಅವರಲ್ಲಿ ಕೊರೋನಾ ವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ.

ತಲೆ ನೋವಾದ 3ನೇ ಸೋಂಕಿತ ವ್ಯಕ್ತಿ:
ನಂಜನಗೂಡಿನ ಜ್ಯುಬಿಲಿಯೆಂಟ್ ಕಾರ್ಖಾನೆಯ ಮೂರನೇ ಕೊರೋನಾ ವೈರಸ್ ಸೋಂಕಿತ ವ್ಯಕ್ತಿ ಆರೋಗ್ಯ ಇಲಾಖೆ, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ. ಈತನಲ್ಲಿ ಕೊರೋನಾ ವೈರಸ್ ಅಂಟಿಕೊಂಡಿರುವುದರಿಂದ ಈತನ ಕುಟುಂಬವನ್ನು ಹೋಂ ಕ್ವಾರಂಟೈನ್‍ನಲ್ಲಿಟ್ಟು ತೀವ್ರ ನಿಗಾವಹಿಸಲಾಗಿದೆ. ಅಲ್ಲದೆ ಇಡೀ ಕುಟುಂಬ ಎಲ್ಲೆಲ್ಲಿ ಹೋಗಿ ಬಂದಿದೆ ಎಂಬ ಮಾಹಿತಿಯನ್ನು ಕಲೆಹಾಕಲು ಕುಟುಂಬದವರಿಗೆ ಪ್ರಶ್ನೆಗಳ ಮೇಲೆ, ಪ್ರಶ್ನೆಗಳ ಸುರಿಮಳೆಗೈದರು, ಕುಟುಂಬದವರು ಮಾತ್ರ ಬೇಜವಾಬ್ದಾರಿತನ, ಉಡಾಫೆಯ ಉತ್ತರ ನೀಡುತ್ತಿದ್ದಾರೆ.

ಸೋಂಕಿತನ ಪತ್ನಿ ಗೃಹ ಪ್ರವೇಶಕ್ಕೆ ಹೋಗಿ ಬಂದಿದ್ದರು:
ಸೋಂಕಿತ 3ನೇ ವ್ಯಕ್ತಿಯ ಪತ್ನಿ ಕುಟುಂಬದವರೊಂದಿಗೆ ಗೃಹ ಪ್ರವೇಶವೊಂದರ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದರು ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ. ಅದನ್ನು ಖಚಿತಪಡಿಸಿಕೊಳ್ಳಲು ಸೋಂಕಿತನ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದಾಗ, ಆಕೆಯೂ ಕೂಡ ಉಡಾಫೆಯಿಂದ, ಹಾರಿಕೆಯ ಉತ್ತರ ನೀಡಿದ್ದಾರೆ. ಒಂದು ವೇಳೆ ಸೋಂಕಿತನಿಂದ ಮಾರಕ ಕೊರೋನಾ ವೈರಸ್ ಆತನ ಪತ್ನಿ, ಕುಟುಂಬದವರಿಗೂ ಅಂಟಿಕೊಂಡಿರುವುದು ದೃಢಪಟ್ಟರೆ, ಗೃಹ ಪ್ರವೇಶಕ್ಕೆ ಬಂದಿದ್ದವರನ್ನೆಲ್ಲಾ ಆರೋಗ್ಯ ತಪಾಸಣೆಗೆ ಒಳಪಡಿಸಿ, ಅವರನ್ನೆಲ್ಲಾ ಹೋಂ ಕ್ವಾರಂಟೈನ್‍ನಲ್ಲಿ 14 ದಿನಗಳ ಕಾಲ ಇರಿಸಬೇಕಾಗುತ್ತದೆ. ಬಹಳ ಮುಖ್ಯವಾಗಿ ಗೃಹ ಪ್ರವೇಶ ಕಾರ್ಯಕ್ರಕ್ಕೆ ಯಾರೆಲ್ಲಾ ಬಂದಿದ್ದರು, ಯಾರೆಲ್ಲಾ ಸಂಪರ್ಕವನ್ನು ಅವರು ಹೊಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ಅವರ ಟ್ರಾವಲ್ ಹಿಸ್ಟರಿಯ ಮಾಹಿತಿಯನ್ನೂ ಕಲೆ ಹಾಕಬೇಕಾಗುತ್ತದೆ. ಹಾಗಾಗಿ 3ನೇ ಸೋಂಕಿತ ಹಾಗೂ ಆತನ ಪತ್ನಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಅವರು ಮಾತ್ರ ನಿಖರವಾಗಿ ಮಾಹಿತಿ ನೀಡುತ್ತಿಲ್ಲ, ಬಾಯಿ ಬಿಡುತ್ತಿಲ್ಲ, ಇದು ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ದೊಡ್ಡ ತಲೆ ನೋವಾಗಿದೆ. ಅಂತಿಮವಾಗಿ ಅವರು ಮಾಹಿತಿ ಸಂಗ್ರಹಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.

ಮೊಬೈಲ್ ಟ್ರ್ಯಾಕಿಂಗ್ ಮೂಲಕ ಟ್ರಾವಲ್ ಹಿಸ್ಟರಿ ಪತ್ತೆ ಹಚ್ಚಲು ಯತ್ನ : ಸೋಂಕಿತ 3ನೇ ವ್ಯಕ್ತಿ ಹಾಗೂ ಆತನ ಪತ್ನಿಯ ಮೊಬೈಲ್‍ನ್ನು ಟ್ರ್ಯಾಕ್ ಮಾಡುವ ಮೂಲಕ ಅವರ ಟ್ರಾವಲ್ ಮಾಹಿತಿಯನ್ನು ಪತ್ತೆಹಚ್ಚುವ ಪ್ರಯತ್ನವನ್ನು ಪೊಲೀಸರು ನಡೆಸುತ್ತಿದ್ದಾರೆ.

14 ಕುಟುಂಬಗಳು ಹೈರಿಸ್ಕ್‍ನಲ್ಲಿ :
ಜ್ಯುಬಿಲಿಯೆಂಟ್ ಕಾರ್ಖಾನೆಯ ಕೊರೋನಾ ಸೋಂಕಿತ ಐದು ಮಂದಿಯ ಸಂಪರ್ಕಕ್ಕೆ ಬಂದಿದ್ದ 14 ಕುಟುಂಬಗಳನ್ನು ಹೋಂ ಕ್ವಾರಂಟೈನ್‍ನಲ್ಲಿಡಲಾಗಿದ್ದು, ಈ ಕುಟುಂಬಗಳು ಹೈರಿಸ್ಕ್ ನಲ್ಲಿವೆ. ಕುಟುಂಬದವರ ಆರೋಗ್ಯವನ್ನು ತೀವ್ರ ತಪಾಸಣೆಗೆ ಒಳಪಡಿಸಿ, ಅವರ ರಕ್ತ, ಗಂಟಲಿನ ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಸಾವಿರ ಮಂದಿಯ ವರದಿಗಾಗಿ ಆತಂಕದಿಂದ ಕಾಯುತ್ತಿರುವ ಜಿಲ್ಲಾಡಳಿತ:
ಜ್ಯುಬಿಲಿಯೆಂಟ್ ಕಾರ್ಖಾನೆಯ ಎಲ್ಲಾ ಕಾರ್ಮಿಕರು, ಅಧಿಕಾರಿ, ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್‍ನಲ್ಲಿಡಲಾಗಿದ್ದು, ಅವರ ರಕ್ತ, ಗಂಟಲಿನ ಮಾದರಿಯನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಏನು ವರದಿ ಬರಲಿದೆ ಎಂದು ಜಿಲ್ಲಾಡಳಿತ, ಅದರಲ್ಲೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಆತಂಕದಿಂದ ಕಾಯುತ್ತಿದ್ದಾರೆ.

ಇಡೀ ಪಟ್ಟಣಕ್ಕೆ ಔಷಧಿ ಸಿಂಪಡಣೆ:
ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ಇಡೀ ನಂಜನಗೂಡು ನಗರಕ್ಕೆ ಔಷಧಿ ಸಿಂಪಡಣೆಯನ್ನು ಮಾಡಲಾಗುತ್ತಿದೆ.

ನಂಜನಗೂಡಿನ ಎಲ್ಲಾ ವಾರ್ಡ್‍ಗಳಿಗೆ ನಗರಸಭೆ ಸಿಬ್ಬಂದಿಗಳು ರಾಸಾಯನಿಕ ಔಷಧಿ ಸಿಂಪಡಿಸುವ ಕಾರ್ಯ ನಡೆಸಿದರು.

ಅಗ್ನಿಶಾಮಕ ವಾಹನ ಬಳಸಿ ನಗರಸಭೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಔಷಧಿ ಸಿಂಪಡಣೆ ಹಿನ್ನೆಲೆಯಲ್ಲಿ ಮನೆಯಿಂದ ಯಾರೂ ಹೊರಬರದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ.

ಭಯ,ಭೀತಿಗೊಂಡಿರುವ ನಂಜನಗೂಡಿನ ಜನತೆ: ಕಾರ್ಖಾನೆಯ ಐದು ಮಂದಿ ಕಾರ್ಮಿಕರಿಗೆ ಕೊರೋನಾ ವೈರಸ್ ಸೋಂಕು ಇರುವುದು ದೃಢಪಟ್ಟಿರುವುದು, ಹಾಗೂ ಆ ಐವರಲ್ಲಿ ನಾಲ್ವರು ನಂಜನಗೂಡಿನ ನಿವಾಸಿಗಳಾಗಿರುವುದು, ಜನರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ. ಹೀಗಾಗಿ ಜನರು ಇದೀಗ ಮನೆ ಬಿಟ್ಟು ಹೊರಗೆ ಬರಲು ಹೆದರುತ್ತಿದ್ದು, ಮನೆಯಲ್ಲಿ ಬಂಧಿಯಾಗಿದ್ದಾರೆ.

ನಂಜನಗೂಡು ರೆಡ್ ಅಲರ್ಟ್ ನಗರ :
ಕಾರ್ಖಾನೆಯಲ್ಲಿ ಐದು ಮಂದಿಗೆ ಕೊರೋನಾ ವೈರಸ್ ಅಂಟಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಜಿಲ್ಲಾಡಳಿತ ನಂಜನಗೂಡನ್ನು ರೆಡ್ ಅಲರ್ಟ್ ನಗರ ಎಂದು ಘೋಷಿಸಿದೆ. ನಂಜನಗೂಡಿನ ಎಲ್ಲಾ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಿ, ತುರ್ತು ಅಗತ್ಯವಿರುವರು ಮತ್ತು ಪಾಸ್ ಹೊಂದಿರುವವರನ್ನು ಹೊರತುಪಡಿಸಿದರೆ, ಯಾರೂ ನಂಜನಗೂಡಿನಿಂದ ಹೊರ ಹೋಗದಂತೆ, ಯಾರೂ ಕೂಡ ಒಳಗೆ ಬಾರದಂತೆ ನಾಕಾ ಬಂದಿ ಹಾಕಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ