ನವದೆಹಲಿ ; ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಳೆದ ಮೂರು ತಿಂಗಳಲ್ಲಿ ಸತತ ಇಳಿಕೆಯಾಗಿದೆ. ಮೂಲಗಳ ಪ್ರಕಾರ ಕಚ್ಚಾತೈಲದ ಬೆಲೆ ಅರ್ಧದಷ್ಟು ಕಡಿಮೆಯಾಗಿದೆ. ಆದರೆ, ಇದರ ಲಾಭವನ್ನು ಗ್ರಾಹಕರಿಗೆ ನೀಡಿ ಕಚ್ಚಾತೈಲದ ಬೆಲೆ ಇಳಿಸಲು ಮುಂದಾಗದ ಕೇಂದ್ರ ಸರ್ಕಾರ ದಿಢೀರನೆ 3 ರೂ ಅಬಕಾರಿ ಸುಂಕ ಏರಿಕೆ ಮಾಡಿದೆ. ಅಲ್ಲದೆ, 2014-15ರ ಕಾಯ್ದೆಯನ್ನು ಪುನರಾರಂಭಿಸುವ ಮೂಲಕ 39.000 ಕೋಟಿ ಹೆಚ್ಚವರಿ ಆದಾಯವನ್ನು ಗಳಿಸಲು ಮುಂದಾಗಿದೆ.
2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡಾಗ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್ಗೆ 9.48 ರೂ. ಮತ್ತು ಡೀಸೆಲ್ ಮೇಲೆ ಲೀಟರ್ 3.56 ರೂ ಏರಿಕೆ ಮಾಡಲಾಗಿತ್ತು. ಅಲ್ಲದೆ, ಜಾಗತಿಕವಾಗಿ ತೈಲ ಬೆಲೆಗಳು ಕುಸಿಯುವುದರಿಂದ ಉಂಟಾಗುವ ಲಾಭಗಳನ್ನು ಕಿತ್ತುಕೊಳ್ಳಲು ಸರ್ಕಾರವು ನವೆಂಬರ್ 2014 ಮತ್ತು ಜನವರಿ 2016 ರ ನಡುವೆ ಒಂಬತ್ತು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದ ಸರ್ಕಾರದ ಆದಾಯ ಹೆಚ್ಚಳವಾಗಿತ್ತು. ಪ್ರಸ್ತುತ ಈ ಬಾರಿಯೂ ಕೇಂದ್ರ ಸರ್ಕಾರ ಇಂತಹ ನೀತಿಗೆ ಮುಂದಾಗಿದೆ ಎನ್ನಲಾಗುತ್ತಿದೆ.
ಪ್ರಸ್ತುತ ದರ ಪರಿಶೀಲನೆಯೂ ಸೇರಿದಂತೆ ಕೇಂದ್ರ ಸರ್ಕಾರ ಈವರೆಗೆ ಪೆಟ್ರೋಲ್ ಸುಂಕ ಪ್ರತಿ ಲೀಟರ್ಗೆ 11.77ರೂ. ಹಾಗೂ ಡೀಸಲ್ ಮೇಲಿನ ಸುಂಕ 13.47 ರಷ್ಟು ಏರಿಕೆ ಮಾಡಿದಂತಾಗಿದೆ. ಪರಿಣಾಮ 2014-5ರಲ್ಲಿ 99,000 ಕೋಟಿ ಇದ್ದ ಕೇಂದ್ರ ಸರ್ಕಾರದ ಆದಾಯ 2016-17ರಲ್ಲಿ 2,42,000 ಕೋಟಿಗೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಜನವರಿಯಿಂದಲೂ ಕಚ್ಚಾತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಬ್ಯಾರೆಲ್ ಕಚ್ಚಾತೈಲಕ್ಕೆ 32 ಡಾಲರ್ ಇಳಿಸಲಾಗಿದೆ. 1991ರ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ದಾಖಲಿಸಿರುವ ಅತ್ಯಂತ ಕನಿಷ್ಟ ಬೆಲೆ ಇದಾಗಿದೆ.
ಅಂದರೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಬೆಲೆಯನ್ನು ತಲಾ 6 ರೂ. ಇಳಿಸುವ ಅವಕಾಶ ಇದೆ. ಆದರೆ, ತೈಲ ಬೆಲೆಯಲ್ಲಿ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಪ್ರವೃತ್ತಿಯನ್ನು ಸರಿಹೊಂದಿಸುವ ಸಲುವಾಗಿ ಸರ್ಕಾರ ತೈಲ ಬೆಲೆ ಇಳಿಸಿಲ್ಲ ಎನ್ನಲಾಗುತ್ತಿದೆ.
ಈ ನಡುವೆ ರಾಜ್ಯ ಬಜೆಟ್ನಲ್ಲೂ ಹಣ ಸಂಗ್ರಹಕ್ಕಾಗಿ ಕಚ್ಚಾತೈಲದ ಮೇಲಿನ ರಾಜ್ಯ ತೆರಿಗೆಯನ್ನು 2. ರೂ ಏರಿಕೆ ಮಾಡಿರುವ ಪರಿಣಾಮ ಕರ್ನಾಕದಲ್ಲಿ ತೈಲದ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ ಎನ್ನಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 72.19 ರೂ ಹಾಗೂ ಡೀಸೆಲ್ ಪ್ರತಿ ಲೀಟರ್ಗೆ 65.02 ರೂ. ಗೆ ಮಾರಾಟ ಮಾಡಲಾಗುತ್ತಿದೆ.