ಕೊರೋನಾ ವೈರಸ್​ ಹರಡಿದವರ ಮೇಲೆ ಕೊಲೆ ಪ್ರಕರಣ ದಾಖಲು; ಇಟಲಿ ಸರ್ಕಾರದಿಂದ ಹೊಸ ಕಾನೂನು

ಮಾರಣಾಂತಿಕ ಕೊರೋನಾ ವೈರಸ್ಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಭಯಾನಕ ಸೋಂಕಿಗೆ ಇಟಲಿಯಲ್ಲಿ 1200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಯಾರಿಗಾದರೂ ಕೊರೋನಾ ಲಕ್ಷಣಗಳು ಕಾಣಿಸಿದರೆ ಅವರು ತಕ್ಷಣ ಚಿಕಿತ್ಸೆ ಪಡೆದರೆ ಒಳಿತು. ಒಂದು ವೇಳೆ ಕೊರೋನಾ ವೈರಸ್ಇದ್ದು ಅದನ್ನು ತಮ್ಮ ಅಜಾಗರೂಕತೆಯಿಂದ ಮತ್ತೊಬ್ಬರಿಗೆ ಹರಡಿದರೆ ಅಂತಹ ವ್ಯಕ್ತಿಯ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ಇಟಲಿ ಸರ್ಕಾರ ಎಚ್ಚರಿಕೆ ನೀಡಿದೆ.

ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ಮೇಲೂ ಆತ ಚಿಕಿತ್ಸೆ ಪಡೆಯಲು ತಿರಸ್ಕರಿಸಿದರೆ, ಉದಾಸೀನ ಮಾಡಿದರೆ, ಅಜಾಗರೂಕತೆಯಿಂದ ಇದ್ದರೆ ಆ ವ್ಯಕ್ತಿಯ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗುವುದು. ಜೊತೆಗೆ 6 ತಿಂಗಳಿಂದ 3 ವರ್ಷ ಜೈಲು ಶಿಕ್ಷೆ ಮತ್ತು ಅಧಿಕ ದಂಡ ವಿಧಿಸಲಾಗುತ್ತದೆ ಎಂದು ಇಟಲಿ ಸರ್ಕಾರ ಶುಕ್ರವಾರ ಘೋಷಿಸಿದೆ.

ಏಕೆಂದರೆ ಕೊರೋನಾ ಸೋಂಕಿತ ವ್ಯಕ್ತಿಯಿಂದ ಬೇರೆಯವರಿಗೆ ಕೊರೋನಾ ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗಾಗಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ಸ್ವಯಂ ಪ್ರೇರಿತವಾಗಿ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆಯಬೇಕು ಎಂದು ಇಟಲಿ ಸರ್ಕಾರ ಜನರಲ್ಲಿ ಅರಿವು ಮೂಡಿಸುವ ಕೆಲಸಕ್ಕೆ ಮುಂದಾಗಿದೆ.

ಇನ್ನು ಓರ್ವ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಖಚಿತವಾಗಿದ್ದು, ಆ ವ್ಯಕ್ತಿಯ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದರೂ ಸಹ, ಚಿಕಿತ್ಸೆ ಪಡೆಯಲು ಆತ ನಿರ್ಲಕ್ಷ್ಯ ತೋರಿಸಿದರೆ ಅಂತಹ ಪ್ರಕರಣವನ್ನು ‘ಉದ್ದೇಶಿತ ಕೊಲೆ’ ಎಂದು ದಾಖಲಿಸಲಾಗುವುದು. ಜೊತೆಗೆ 21 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಇಟಲಿ ಸರ್ಕಾರ ಆದೇಶಿಸಿದೆ.

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದೆ. ಈವರೆಗೆ ಕಲಬುರ್ಗಿಯ ವೃದ್ಧ ಹಾಗೂ ದೆಹಲಿಯ ಮಹಿಳೆ ಕೊರೋನಾದಿಂದ ಮೃತಪಟ್ಟಿದ್ದಾರೆ. ಕರ್ನಾಟಕ ಸೇರಿ 13 ರಾಜ್ಯಗಳಲ್ಲಿ ಕೊರೋನಾ ವೈರಸ್​ ಇರುವುದು ದೃಢಪಟ್ಟಿದೆ.ಇನ್ನು, ಚೀನಾದಲ್ಲಿ ಈವರೆಗೆ 80,824 ಜನರಿಗೆ ಕೊರೋನಾ ತಗುಲಿದೆ. 3,189 ಜನ ಕೊರೋನಾಗೆ ಬಲಿಯಾಗಿದ್ದಾರೆ. ವಿಶ್ವಾದ್ಯಂತ 1,45,995 ಜನರಿಗೆ ಕೊರೋನಾ ತಗುಲಿದ್ದು, 5436 ಮಂದಿ ಮೃತಪಟ್ಟಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ