ಬೆಂಗಳೂರು: ಇದುವರೆಗೂ ಆರು ಬಜೆಟ್ಗಳನ್ನು ಮಂಡನೆ ಮಾಡಿರುವ ಬಿ.ಎಸ್.ಯಡಿಯೂರಪ್ಪ ಅವರು ಇಂದು ಏಳನೇ ಆಯವ್ಯಯ ಮಂಡಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿಎಸ್ವೈ ಸದನದಲ್ಲಿ ಬಜೆಟ್ ಪ್ರತಿ ಓದಲಿದ್ದಾರೆ.
ಈ ಬಾರಿ ಬಜೆಟ್ ಗಾತ್ರ 2.50 ಲಕ್ಷ ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆರ್ಥಿಕ ಸಂಕಷ್ಟ, ರಾಜ್ಯ ಸರ್ಕಾರ ಮೇಲಿನ ಸಾಲ, ಕೇಂದ್ರದ ಜಿಎಸ್ಟಿ ಪರಿಹಾರ ಸಕಾಲಕ್ಕೆ ಬಾರದಿರುವುದು.. ಈ ಎಲ್ಲಾ ಸಂಕಷ್ಟಗಳ ನಡುವೆ ಬಿಎಸ್ವೈ ಬಹುನಿರೀಕ್ಷೆಯ ಬಜೆಟ್ ಮಂಡಿಸಲಿದ್ದಾರೆ.
ಬಿಎಸ್ವೈ ಅವರ ಹಿಂದಿನ ಆರು ಬಜೆಟ್ಗಳನ್ನು ಗಮನಿಸಿದಾಗ ಅವರ ಪ್ರತಿ ಬಜೆಟ್ನಲ್ಲೂ ವಿಶಿಷ್ಟ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅದು ಕೃಷಿಗಾಗಿ ಪ್ರತ್ಯೇಕ ಬಜೆಟ್ ಹೊರಡಿಸುವ ಮೂಲಕ ತಾವು ಅಪ್ಪಟ ರೈನ ನಾಯಕ ಎಂದು ತೋರಿಸಿಕೊಟ್ಟಿದ್ದರು. ಅದಾದ ಬಳಿಕ ಹೈಸ್ಕೂಲ್ ಮಕ್ಕಳಿಗೆ ಉಚಿತ ಸೈಕಲ್ ವಿತರಣೆ, ಭಾಗ್ಯಲಕ್ಷ್ಮೀ ಬಾಂಡ್, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ಮಠಗಳಿಗೆ ಅನುದಾನವನ್ನು ಬಜೆಟ್ನಲ್ಲಿ ಮೊದಲ ಬಾರಿಗೆ ಮೀಸಲಿಟ್ಟ ಹೆಗ್ಗಳಿಕೆ ಬಿಎಸ್ವೈ ಅವರಿಗೆ ಸಲ್ಲುತ್ತದೆ. ಈ ಹಿಂದಿನ ಬಜೆಟ್ಗಳಂತೆ ಈ ಬಾರಿಯೂ ಬಿಎಸ್ವೈ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಬಜೆಟ್ ನೀಡುತ್ತಾರೆ ಎಂದು ಹಲವರು ನಿರೀಕ್ಷಿಸುತ್ತಿರಬಹುದು. ಆದರೆ, ರಾಜ್ಯದ ಇಂದಿನ ಆರ್ಥಿಕ ಸ್ಥಿತಿಗತಿಗಳನ್ನು ನೋಡಿ ಹೇಳುವುದಾದರೆ ಈ ಬಾರಿಯ ಬಜೆಟ್ ವೆಚ್ಚ ಕಡಿತದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಿದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.