ಭಾರತದಲ್ಲಿ 28 ಮಂದಿಗೆ ಕೊರೋನಾ ವೈರಸ್: ಚಿಕಿತ್ಸೆಗಾಗಿ 50 ವಿಶೇಷ ಲ್ಯಾಬ್​ ನಿರ್ಮಾಣ

ನವದೆಹಲಿ: ಚೀನಾದಲ್ಲಿ ಉದ್ಭವಿಸಿದ ಕೊರೋನಾ ವೈರಸ್ ಈಗ ಭಾರತದಲ್ಲೂ ಹರಡುತ್ತಿದೆ. ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರೇ ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ ಈವರೆಗೂ 28 ಮಂದಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ. ಇವರಲ್ಲಿ 14 ವಿದೇಶೀ ಪ್ರವಾಸಿಗರೂ ಒಳಗೊಂಡಿದ್ಧಾರೆ. ಸೋಂಕು ತಗುಲಿರುವವರ ಪೈಕಿ ಮೂವರು ಚೇತರಿಸಿಕೊಂಡಿದ್ದಾರೆನ್ನಲಾಗಿದೆ.

ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರು ಇಂದು ದೆಹಲಿ ಸರ್ಕಾರ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ವೈರಸ್ ಸೋಂಕು ಹರಡುವುದನ್ನು ಹೇಗೆ ನಿಗ್ರಹಿಸಬೇಕು? ಇದಕ್ಕೆ ತಾವು ಎಷ್ಟರಮಟ್ಟಿಗೆ ಸಿದ್ಧವಾಗಿದ್ದೇವೆ ಎಂಬುದನ್ನು ತಾವು ಅವಲೋಕಿಸಿದ್ದಾಗಿ ಸಚಿವರು ತಿಳಿಸಿದ್ದಾರೆ.

ವೈರಸ್ ಸೋಂಕು ಹರಡುವುದು ಹೆಚ್ಚಾಗುತ್ತಿರುವುದರಿಂದ ಭಾರತಕ್ಕೆ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈವರೆಗೆ ವೈರಸ್ ಸೋಂಕು ಇದ್ದ 12 ದೇಶಗಳಿಂದ ಬರುವ ಜನರನ್ನಷ್ಟೇ ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಈಗ ಯಾವುದೇ ದೇಶದಿಂದ ಬರುವ ಪ್ರತಿಯೊಬ್ಬರನ್ನೂ ಕೊರೋನಾ ವೈರಸ್ ಪತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆಯಂತೆ.

ಕೊರೋನಾ ವೈರಸ್ ಪತ್ತೆಗೆ ಇರುವ ಲ್ಯಾಬೋರೇಟರಿಗಳ ಸಂಖ್ಯೆಯನ್ನು ಹೆಚ್ಚಿಸುತ್ತೇವೆ. ಈಗ 34 ಪ್ರಯೋಗಾಲಯಗಳಿವೆ. ಅಗತ್ಯಬಿದ್ದರೆ ಈ ಸಂಖ್ಯೆಯನ್ನು 50ಕ್ಕೆ ಏರಿಸುತ್ತೇವೆ ಎಂದು ಹರ್​ ವರ್ಧನ್ ಮಾಹಿತಿ ನೀಡಿದ್ಧಾರೆ.

ಕೊರೋನಾ ವೈರಸ್​ನಿಂದ ಬಾಧಿತವಾಗಿರುವ ಇರಾನ್ ದೇಶದಲ್ಲೂ ಭಾರತ ಒಂದು ಲ್ಯಾಬೊರೇಟರಿ ಸ್ಥಾಪಿಸುತ್ತಿದೆ. ಇಲ್ಲಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವ ಮುನ್ನ ಈ ಲ್ಯಾಬ್​ನಲ್ಲಿ ಪರೀಕ್ಷೆಗೊಳಪಡಿಸಲಾಗುವುದು ಎಂದು ಸಚಿವರು ಹೇಳಿದ್ಧಾರೆ.

ಇನ್ನು, ಕೊರೊನಾ ವೈರಸ್ ಸೋಂಕಿಗೆ ಯಾವುದೇ ಮದ್ದು ಕಂಡುಹಿಡಿಯಲಾಗಿಲ್ಲ. ರೋಗಲಕ್ಷಣಗಳಿಗಷ್ಟೇ ಚಿಕಿತ್ಸೆ ನೀಡಲಾಗುತ್ತದೆ. ಹೀಗಾಗಿ, ಸೋಂಕಿನಿಂದ ಸಂಪೂರ್ಣವಾಗಿ ಮುಕ್ತವಾಗುವುದು ಸದ್ಯಕ್ಕೆ ಅಸಾಧ್ಯ. ಭಾರತದಲ್ಲಿ ಮೊದಲು ಸೋಂಕು ತಗುಲಿದ ಕೇರಳದ ಎಲ್ಲಾ ಮೂವರು ವ್ಯಕ್ತಿಗಳು ಸದ್ಯಕ್ಕೆ ಚೇತರಿಸಿಕೊಂಡಿರುವುದು ತಿಳಿದುಬಂದಿದೆ. ನಿನ್ನೆ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿತ್ತು. ಇವತ್ತು ಈ ಸಂಖ್ಯೆ 28ಕ್ಕೆ ಏರಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ