ರವಿ ಪೂಜಾರಿಯನ್ನು 14 ದಿನ ಪೊಲೀಸ್​ ಕಸ್ಟಡಿಗೆ ಒಪ್ಪಿಸಿದ ಕೋರ್ಟ್​

ಬೆಂಗಳೂರು:ನಾನಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನುಭಾನುವಾರ ತಡರಾತ್ರಿ ಕರ್ನಾಟಕ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದರು. ಇಂದು ಆತನನ್ನು ಕೋರ್ಟ್ಗೆ ಹಾಜರು ಪಡಿಸಲಾಗಿದ್ದು, 14 ದಿನಗಳ ಪೊಲೀಸ್ಕಸ್ಟಡಿಗೆ ಒಪ್ಪಿಸಲಾಗಿದೆ.

 
2018ರಲ್ಲಿ ರವಿ ಪೂಜಾರಿಯನ್ನು ಆಫ್ರಿಕಾದ ಸೆನೆಗಲ್​ನಲ್ಲಿ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು. ಈತನನ್ನು ತಮ್ಮ ಸುಪರ್ದಿಗೆ ಪಡೆಯಲು ರಾಜ್ಯ ಪೊಲೀಸರು ಪ್ರಯತ್ನ ನಡೆಸಿದ್ದರು. ಆದರೆ, ಕಾನೂನು ತೊಡಕುಗಳಿಂದ ಹಸ್ತಾಂತರ ವಿಳಂಬವಾಗಿತ್ತು. ಈಗ ಈ ಕಾನೂನು ತೊಡಕು ನಿವಾರಣೆ ಆಗಿದ್ದು, ರವಿಯನ್ನು ತಡರಾತ್ರಿಯೇ ಬೆಂಗಳೂರಿಗೆ ಕರೆತರಲಾಗಿತ್ತು.

ಇಂದು ಬೆಳಗ್ಗೆ ರವಿ ಪೂಜಾರಿಯನ್ನು ೧ನೇ ಎಸಿಎಂಎಂ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದರು. ಆತನ ವಿರುದ್ಧ ಸಾಕಷ್ಟು ಪ್ರಕರಣಗಳಿವೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ರವಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸ್​ ಪರ ವಕೀಲರು ಮನವಿ ಮಾಡಿದರು. ಹೀಗಾಗಿ  ಕೋರ್ಟ್​ ರವಿಯನ್ನು 14 ದಿನಗಳ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಸದ್ಯ, ಸಿಸಿಬಿ ಪೊಲೀಸರು ಭೂಗತ ಪಾತಕಿ ರವಿ ಪೂಜಾರಿಯನ್ನು ವಶಕ್ಕೆ ಪಡೆದಿದ್ದಾರೆ.

90ರ ದಶಕದಲ್ಲಿ ಭೂಗತ ಲೋಕದಲ್ಲಿ ದೊಡ್ಡಮಟ್ಟದಲ್ಲಿ ಹೆಸರು ಮಾಡಿದ್ದ ರವಿ ಪೂಜಾರಿ ದುಬೈನಲ್ಲಿ ಕುಳಿತೇ ಮುಂಬೈ, ಮಂಗಳೂರು ಮತ್ತು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ಎನ್ನಲಾಗಿದೆ. ಸುಮಾರು 15 ವರ್ಷಗಳಿಂದ ರವಿ ಪೂಜಾರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಅಲ್ಲದೆ, ಈತನಿಗಾಗಿ NIA, RAW ಹಾಗೂ ಕೇಂದ್ರ ತನಿಖಾ ತಂಡಗಳೂ ಹುಡುಕಾಟ ನಡೆಸಿದ್ದರು.

ನೂರಕ್ಕೂ ಹೆಚ್ಚು ಪ್ರಕರಣಗಳು:
ರವಿ ಪೂಜಾರಿ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 36, ಮಂಗಳೂರಿನಲ್ಲಿ 39 ಸೇರಿ ಹಲವು ಠಾಣೆಗಳಲ್ಲಿ ಕೇಸ್​ಗಳು ದಾಖಲಾಗಿವೆ. ಈ ಬಗ್ಗೆ ರಾಜ್ಯ ಪೊಲೀಸ್​ ಇಲಾಖೆ ತನಿಖೆ ನಡೆಸಲಿದೆ. ಸದ್ಯ, ರಾಜ್ಯದಲ್ಲಿರುವ ಎಲ್ಲ ಕೇಸ್​​ಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.

ರಾಜಕಾರಣಿಗಳಿಗೆ ಬೆದರಿಕೆ:
ರವಿ ಪೂಜಾರಿ ಹಣಕ್ಕಾಗಿ ಅನೇಕ ರಾಜಕಾರಣಿಗಳಿಗೆ ಬೆದರಿಕೆ ಒಡ್ಡಿದ್ದಾರೆ. 2018ರಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಗೆ ಹಣಕ್ಕಾಗಿ ರವಿ ಪೂಜಾರಿ ಬೇಡಿಕೆ ಇಟ್ಟಿದ್ದ. 15 ಕೋಟಿ ಹಣ‌ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕರೆ ಮಾಡಿದ್ದ. ಮಾಜಿ ಸಚಿವ ಅನಿಲ್ ಲಾಡ್​​ಗೆ 10 ಕೋಟಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದ. 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ