ಭಾರತಕ್ಕೆ ಬಂದಿಳಿದ ಅಮೆರಿಕ ಅಧ್ಯಕ್ಷ ಟ್ರಂಪ್; ಭವ್ಯ ಸ್ವಾಗತ ಕೋರಿದ ಮೋದಿ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಳಗ್ಗೆ 11.35ಕ್ಕೆ ಭಾರತಕ್ಕೆ ಆಗಮಿಸಿದರು. ಅಹಮದಾಬಾದ್​ ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರು ಭವ್ಯ ಸ್ವಾಗತ ಕೋರಿದರು. ತಮ್ಮ ಕುಟುಂಬ ಸಮೇತ ಭಾರತಕ್ಕೆ ಆಗಮಿಸಿರುವ ಅವರ ಎರಡು ದಿನ ಇಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಈ ವೇಳೆ ಭಾರತ ಹಾಗೂ ಅಮೆರಿಕ ನಡುವೆ ಪ್ರಮುಖ ವ್ಯಾಪಾರ ಒಪ್ಪಂದ ನಡೆಯುವ ಸಾಧ್ಯತೆ ಇದೆ.

ಗುಜರಾತ್​ನ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಆಗಮಿಸಿದರು. ಈ ವೇಳೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಾಳೆ ರಾಜಧಾನಿಯಲ್ಲಿ ಇಬ್ಬರೂ ವಿವಿಧ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ.

ಇಂದು  ಅಹ್ಮದಾಬಾದ್​ನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿರುವ ‘ಕೆಮ್ಚೋ ಟ್ರಂಪ್’ ಕಾರ್ಯಕ್ರಮ ಟ್ರಂಪ್ ಭೇಟಿಯ ಪ್ರಮುಖ ಹೈಲೈಟ್ ಆಗಿರಲಿದೆ. ಇಲ್ಲಿ ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಟ್ರಂಪ್ ಸಾಗಿ ಬರುವ ದಾರಿಯುದ್ಧಕ್ಕೂ ಸಕಲ ವ್ಯವಸ್ಥೆ ಮಾಡಲಾಗಿದೆ. ಅಹ್ಮದಾಬಾದ್​ನ ಕೊಳಕು ಪ್ರದೇಶಗಳು ಮರೆಯಾಗುವ ರೀತಿಯಲ್ಲಿ ರಸ್ತೆಯ ಬದಿಗಳಲ್ಲಿ ಗೋಡೆಗಳನ್ನ ನಿರ್ಮಿಸಲಾಗಿರುವುದು ವಿಶೇಷ.

ನಾಳೆ ತಾಜ್ ಮಹಲ್​ಗೆ ಟ್ರಂಪ್ ಬರಲಿರುವುದರಿಂದ ಅಲ್ಲಿ ಮಂಗಗಳ ಕಾಟ ಇಲ್ಲದಂತೆ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ತಾಜ್ ಮಹಲ್ ಬದಿಯಲ್ಲಿರುವ ಯಮುನಾ ನದಿಯನ್ನು ತುಸು ಸ್ವಚ್ಛಗೊಳಿಸಲಾಗಿದೆ. ನಾಳೆ 10 ಗಂಟೆಗೆ ದೆಹಲಿಯ ವಿಮಾನ ನಿಲ್ದಾಣದಿಂದ ಟ್ರಂಪ್ ಅವರು ನಿರ್ಗಮಿಸಲಿದ್ಧಾರೆ.

ಟ್ರಂಪ್ ಅವರ ಜೊತೆ ಪತ್ನಿ ಮೆಲಾನಿಯಾ ಟ್ರಂಪ್, ಮಗಳು ಇವಾಂಕಾ ಹಾಗೂ ಅಳಿಯ ಜರೆದ್ ಕುಶ್ನರ್ ಆಗಮಿಸಿದ್ದಾರೆ. ಜೊತೆಗೆ ಒಂದು ಅಮೆರಿಕನ್ ನಿಯೋಗವೂ ಆಗಮಿಸಿದೆ. ಮಂಗಳವಾರದಂದು ಮೆಲಾನಿಯಾ ಟ್ರಂಪ್ ಅವರು ದೆಹಲಿಯ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ವಿನೂತನವಾಗಿ ಜಾರಿಗೆ ತಂದಿರುವ ಹ್ಯಾಪಿನೆಸ್ ಕ್ಲಾಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಲಿದ್ಧಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ